ಶಾಲಾ ಮಕ್ಕಳ ಹಾಲಿನ ಪುಡಿ ಪಾಕೇಟ್ ಗೂ ಕನ್ನ

bkt-05-11
ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿಕೊಂಡಿರುವ ಹಾಲಿನ ಪುಡಿ, ರಾಗಿ ಹಿಟ್ಟು, ಅಡುಗೆ ಎಣ್ಣೆ ಪಾಕೇಟ್ ಗಳು. ಎಎಸ್ಪಿ ಮಹಾಂತೇಶ್ ಜಿದ್ದಿ, ಸಿಇಎನ್ ಠಾಣೆ ಡಿಎಸ್ಪಿ ಮಂಜುನಾಥ ಗಂಗಲ್ ಹಾಗೂ ಠಾಣೆಯ ಸಿಬ್ಬಂದಿ ಚಿತ್ರದಲ್ಲಿ ಇದ್ದಾರೆ.
Published on

ಬಾಗಲಕೋಟೆ: ಸರ್ಕಾರದ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಸಿಗಬೇಕಿದ್ದ ಹಾಲಿನ ಪುಡಿ ಪಾಕೇಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಮಹಾರಾಷ್ಟ್ರಕ್ಕೆ ಸಾಗಿಸಲು ಮುಂದಾಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣ ಹಾಲಿನ ಪುಡಿ ಪಾಕೇಟ್‌ಗಳನ್ನು ವಶಕ್ಕೆ ಪಡಿಸಿಕೊಂಡಿರುವ ಘಟನೆ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಶಾಲೆಗಳಿಗೆ ಹಾಲಿನ ಪುಡಿ ಪಾಕೇಟ್ ಗಳನ್ನು ಸರಬರಾಜು ಮಾಡಲು ಸಬ್ ಲೀಜ್ ಪಡೆದುಕೊಂಡಿದ್ದ ಸಿದ್ದಪ್ಪ ಕಿತ್ತಲಿ ಎನ್ನುವ ವ್ಯಕ್ತಿಯೇ ಪ್ರಕರಣದ ಆರೋಪಿ. ತನ್ನ ಮನೆ ಎದುರು ಇರುವ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನು ಸಂಗ್ರಹಿಸಿದ್ದ. ವಾಹನದಲ್ಲಿ ತುಂಬಿ ಮಹಾರಾಷ್ಟ್ರಕ್ಕೆ ಸಾಗಿಸಲು ಸಿದ್ದತೆ ಮಾಡಿಕೊಂಡಿದ್ದ ವೇಳೆಯೇ ಖಚಿತ ಮಾಹಿತಿ ಮೇಲೆ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿ ಸಮೇತ ದಾಸ್ತಾನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ ವೇಳೆ ಹಾಲಿನ ಪುಡಿ ಪಾಕೇಟ್ ಜೊತೆ ರಾಗಿ ಹಿಟ್ಟಿನ ಪಾಕೇಟ್ ಹಾಗೂ ಅಡುಗೆ ಎಣ್ಣೆ ಪಾಕೇಟ್ ಸಹ ಸಿಕ್ಕಿವೆ. ೧೭.೯೦ ಲಕ್ಷ ರೂ. ಮೌಲ್ಯದ ಒಟ್ಟು ೪೪೭೫ ಕೆಜಿ ಹಾಲಿನ ಪುಡಿ, ೧೯೫೫೦ ರೂ. ಮೌಲ್ಯದ ೩೨೫ ಕೆಜಿ ರಾಗಿ ಹಿಟ್ಟು ಹಾಗೂ ೪೫೦೦ ರೂ.ಗಳ ೫೦ ಕೆಜಿ ಅಡುಗೆ ಎಣ್ಣೆ ಪಾಕೇಟ್ ಗಳು ಸೇರಿ ಒಟ್ಟು ೧೮.೧೪ ಲಕ್ಷ ರೂ. ಮೌಲ್ಯದ ವಸ್ತುಗಳು ಹಾಗೂ ಒಂದು ಬೊಲೇರೋ ವಾಹನ ಜಪ್ತಿ ಮಾಡಿಕೊಂಡಿದ್ದು, ಆರೀಪಿ ಸಿದ್ದಪ್ಪ ಕಿತ್ತಲಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಯ ಹುನಗುಂದ ಹಾಗೂ ಬಾದಾಮಿ ತಾಲೂಕಿನ ಶಾಲೆಗಳಿಗೆ ಹಾಲಿನ ಪುಡಿ ಪಾಕೇಟ್ ಗಳನ್ನು ಸರಬರಾಜು ಮಾಡುವ ಗುತ್ತಿಗೆಯನ್ನು ಮಹಾಲಿಂಗಪುರದ ಶ್ರೀಶೈಲ ಅಂಗಡಿ ಎನ್ನುವವರು ಪಡೆದುಕೊಂಡಿದ್ದಾರೆ. ಶ್ರೀಶೈಲ ಕಡೆಯಿಂದ ಸಿದ್ದಪ್ಪ ಕಿತ್ತಲಿ ಖಾಸಗಿಯಾಗಿ ಸಬ್ ಲೀಜ್ ಪಡೆದುಕೊಂಡಿದ್ದನು.

ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಡಿಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ಪೊಲೀಸ್ ಅಽಕಾರಿಗಳು ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರಿಗೆ ದಾಳಿ ನಡೆಸಿ ಅಕ್ರಮವಾಗಿ ಸಾಗಾಟವಾಗಲಿದ್ದ ಹಾಲಿನ ಪುಡಿ ಪಾಕೇಟ್ ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net