ಶಾಲಾ - ಕಾಲೇಜುಗಳಿಗೆ ಡಿಜಿಟಲ್ ಗ್ರಂಥಾಲಯ

59
Published on

ಮಾಗಡಿ  : ಶಾಲಾ, ಕಾಲೇಜುಗಳಿಗೆ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗುವುದು ಎಂದು ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ನಾರಾಯಣ ಹೇಳಿದರು.

ತಾಲೂಕಿನ ಲಕ್ಕೇನಹಳ್ಳಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು, ಮಹಿಳೆಯರು ಗ್ರಾಮಸಭೆಗೆ ಕಡ್ಡಾಯವಾಗಿ ಭಾಗವಹಿಸಿ, ಇದರ ಮಹತ್ವ ಅರಿತು ಸಮಸ್ಯೆ ಬಗ್ಗೆ ಸಭೆಯ ಗಮನಕ್ಕೆ ತಂದರೆ ಮಹಿಳೆಯರ -ಮಕ್ಕಳ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಸಿಎಸ್‌ಆರ್ ಅನುದಾನದಡಿ ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲೆ, ಅಂಗನವಾಡಿಗಳಿಗೆ ಸ್ಥಳೀಯ ಸದಸ್ಯರ ಸಹಕಾರದಿಂದ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.

ಲಕ್ಕೇನಹಳ್ಳಿ ಪ್ರೌಢಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಪ್ರತಿವರ್ಷ ಶೇ.100 ಫಲಿತಾಂಶ ಲಭಿಸುತ್ತಿದೆೆ. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಶಾಲೆಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಸಿಎಸ್‌ಆರ್ ಅನುದಾನದಡಿ ಒದಗಿಸಲಾಗುವುದು ಎಂದರು.

ಜೀವಿಕ ಗಂಗಹನುಮಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಸಮವಸ, ವಿದ್ಯಾರ್ಥಿ ವೇತನ, ಬಿಸಿಯೂಟ ನೀಡಿದರೂ ತಾಲೂಕಿನಲ್ಲಿ 70 ಸರ್ಕಾರಿ ಶಾಲೆಗಳು ಮುಚ್ಚಿವೆ. ಕನ್ನಡ ಶಾಲೆ ಉಳಿಸಿ, ಬೆಳೆಸಲು ಪಾಲಕರು ಮುಂದಾಗಬೇಕು ಎಂದರು.

ಕುದೂರು ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎಚ್.ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಶಾಲೆ, ಪಾಲಕರಿಗೆ ಉತ್ತಮ ಹೆಸರು ತರುವ ಕೆಲಸ ಮಾಡಿ. ಆಸೆ, ಆಮಿಷಗಳಿಗೆ ವಿದ್ಯಾರ್ಥಿಗಳು ಬಲಿಯಾಗಬೇಡಿ, ಶಿಕ್ಷಕರು, ಗುರು,ಹಿರಿಯರ ಬಗ್ಗೆ ಗೌರವವಿರಲಿ, ನೀವು ಯಾವ ಹುದ್ದೆ ಅಲಂಕರಿಸದಿದ್ದರೂ ಪರವಾಗಿಲ್ಲ. ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರವಂತವರಾಗಿ ಎಂದರು.

ಪಿಡಿಒ ನಾಗರಾಜು ಮಾತನಾಡಿ, ಮಾನಹಾನಿ, ಮಹಿಳೆಯರ ಮೇಲಿನ ದೌರ್ಜನ್ಯ, ವಂಚನೆ, ಮೋಸದ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಅಪರಾಧಗಳ ಬಗ್ಗೆ ಸಾಕಷ್ಟು ಸೆಕ್ಷನ್‌ಗಳು ಬದಲಾವಣೆಯಾಗಿದೆ ಎಂದರು.

ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ವಿಜಯಲಕ್ಷ್ಮಮ್ಮ,ಯೋಗಣ್ಣ, ರೂಪಾ, ಬೈರೇಗೌಡ, ರಂಗಮ್ಮ, ಸುಷ್ಮಾ, ಬಲರಾಮ, ರಾಮ ಕೃಷ್ಣಯ್ಯ, ಕೃಷ್ಣಪ್ಪ, ಪಂಕಜಾ, ಮಮತಾ, ವತ್ಸಲಾಬಾಯಿ, ಜಯಲಕ್ಷ್ಮಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net