ಕೊಳ್ಳೇಗಾಲ: ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಮೂರನೇ ತರಗತಿ ವಿದ್ಯಾರ್ಥಿಗೆ ಕೆನ್ನೆಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಗುರುವಾರ ಮೂರನೇ ತರಗತಿ ಓದುತ್ತಿದ್ದ ಬಾಲಕನ ಕೆನ್ನೆಗೆ ಶಿಕ್ಷಕರೊಬ್ಬರು ಹೊಡೆದಿದ್ದರು. ಬಾಲಕ ಶಾಲೆ ಮುಗಿಸಿ ಮನೆಗೆ ಹಿಂದಿರುಗಿದಾಗ ಸಂಗತಿ ಪಾಲಕರ ಗಮನಕ್ಕೆ ಬಂದಿತ್ತು. ಬಾಲಕನ ತಂದೆ ಮಧುಚಂದ್ರ ಶಾಲೆಗೆ ತೆರಳಿ ಶಿಕ್ಷಕನಿಗೆ ತರಾಟೆಗೆ ತೆಗೆದುಕೊಂಡು ಬಿಇಒಗೆ ದೂರು ನೀಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಶಾಲೆಗೆ ವಿದ್ಯಾರ್ಥಿಯ ಪಾಲಕರನ್ನು ಕರೆಸಿದ್ದರು. ಈ ವೇಳೆ ಶಾಲಾ ತರಗತಿಯೊಳಗಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಹೊಡೆದಿರುವುದು ದೃಢಪಟ್ಟಿದೆ. ವಿದ್ಯಾರ್ಥಿ ತಂದೆ ಮಧುಚಂದ್ರ, ಬಾಲಕನ ಮೇಲೆ ಹಲ್ಲೆ ಮಾಡಿರುವ ಶಿಕ್ಷಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಶಾಲಾ ಶಿಕ್ಷಣ ಇಲಾಖೆ, ಸರ್ಕಾರದ ಉಸ್ತುವಾರಿ ಕಾರ್ಯದರ್ಶಿ, ಮಕ್ಕಳ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ನೋಟಿಸ್: ಘಟನೆ ಸಂಬಂಧ ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ನೋಟಿಸ್ ನೀಡಿದ್ದಾರೆ. ಬಾಲಕನ ಕೆನ್ನೆಗೆ ಥಳಿಸಿರುವ ಶಿಕ್ಷಕನ ಮೇಲೆ ಯಾವ ಕ್ರಮವಹಿಸಿದ್ದೀರಿ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಶಿಕ್ಷಕ ವಿದ್ಯಾರ್ಥಿ ಹೊಡೆದಿರುವುದು ದೃಢಪಟ್ಟಿದೆ. ಬೆಂಚ್ ತಳ್ಳಿದ ವಿಚಾರಕ್ಕೆ ಹೊಡೆದಿರುವುದಾಗಿ ತಿಳಿದು ಬಂದಿದೆ. ಶಾಲೆಯ ಮುಖ್ಯಶಿಕ್ಷಕಿ ಹಾಗೂ ಹಲ್ಲೆ ಮಾಡಿದ ಶಿಕ್ಷಕರು ತಪ್ಪು ಒಪ್ಪಿಕೊಂಡಿದ್ದಾರೆ. ಇದೀಗ ಶಾಲೆ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದೇನೆ. ಸೂಕ್ತ ತನಿಖೆ ನಡೆಸಿ ಕ್ರಮವಹಿಸಲಾಗುವುದು.
ಎಂ.ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಕೊಳ್ಳೇಗಾಲ