

ಹನೂರು: ತಾಲೂಕಿನ ಶಾಗ್ಯ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಬುಧವಾರ ಇಕೋ ಕ್ಲಬ್ ವತಿಯಿಂದ ವನದರ್ಶನ ಕಾರ್ಯಕ್ರಮದ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ಮಹತ್ವವನ್ನು ತಿಳಿಸಿ ಕೊಡಲಾಯಿತು.
ಶಾಲೆಯಿಂದ ಬಸವನ ಕಡ ಅರಣ್ಯ ಪ್ರದೇಶಕ್ಕೆ ಶಿಕ್ಷಕರೊಂದಿಗೆ ಆಗಮಿಸಿದ 73 ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ಇಲ್ಲಿನ ಮರ ಗಿಡಗಳು, ಪ್ರಾಣಿ-ಪಕ್ಷಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತಲ್ಲದೆ, ಅರಣ್ಯದಿಂದಾಗುವ ಪ್ರಯೋಜನ ಹಾಗೂ ಅದರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಅರಣ್ಯ ಪ್ರದೇಶದ ಜೀವವೈವಿಧ್ಯತೆಯನ್ನು ವೀಕ್ಷಿಸಿ ಖುಷಿಪಟ್ಟರು.
ಅರಣ್ಯ ರಕ್ಷಕ ಗೋರೆಸಾಬ್ ಮಾತನಾಡಿ, ಅರಣ್ಯ ಮನುಕುಲದ ಸಂಪತ್ತು. ಪರಿಸರದಲ್ಲಿ ಸಮತೋಲವನ್ನು ಕಾಪಾಡಲು ಸಹಕಾರಿ. ಹಾಗಾಗಿ ಅರಣ್ಯ ಹಾಗೂ ವನ್ಯ ಸಂಪತ್ತನ್ನು ಸಂರಕ್ಷಿಸಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬಹುದು. ಆದರೆ ಈ ಬಗ್ಗೆ ತಿಳಿಯದ ಕೆಲವರು ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳ ನಾಶಕ್ಕೆ ಮುಂದಾಗುತ್ತಿದ್ದಾರೆ. ಇದು ವಾತಾವರಣದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ವ್ಯಕ್ತಿಯ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವನ್ಯಜೀವಿ ಬೇಟೆ ಹಾಗೂ ಅರಣ್ಯ ಪ್ರದೇಶಕ್ಕೆ ಸಂಚಕಾರ ತರುವುದು ಅಪರಾಧ. ಈ ಕೃತ್ಯದಲ್ಲಿ ಭಾಗಿಯಾಗುವವರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಟು ಗಿಡ, ಮರಗಳನ್ನು ಪೋಷಿಸಿ ಬೆಳೆಸುವುದರ ಜತೆಗೆ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಹಾಗೆಯೇ ಅರಣ್ಯದ ಮಹತ್ವವನ್ನು ಜನರಿಗೆ ತಿಳಿಸಿ ಕೊಡುವುದರ ಮೂಲಕ ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಅರಣ್ಯ ಪ್ರೇಮ ಮೆರೆದರಲ್ಲದೆ, ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ಗಳನ್ನು ತೆರೆವುಗೊಳಿಸಿದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಮಹಾದೇವ, ಶಿಕ್ಷಕರಾದ ಪ್ರಕಾಶ್, ನಾಗೇಂದ್ರ, ಶಿವರಾಜು, ದೀಪಾ, ಅರಣ್ಯ ಸಿಬ್ಬಂದಿ ಕೃಷ್ಣ ಮಾದರ್, ಮಹಾಂತೇಶ್, ಮಲ್ಲಿಕಾರ್ಜುನ ಮತ್ತಿತರರಿದ್ದರು.