

ಯಲ್ಲಾಪುರ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಸೆ. 30ರಂದು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಪಟ್ಟಣದ ತಾ.ಪಂ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಶಾಂತಿ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಗಣಪತಿ ಶಾಸ್ತ್ರಿ ಮಾತನಾಡಿ, ತೀರ್ಪು ಏನೇ ಬಂದರೂ ಸ್ಥಳೀಯವಾಗಿ ಯಾರೊಬ್ಬರೂ ಪ್ರಚೋದನೆಗೆ ಒಳಗಾಗಬಾರದು. ತೀರ್ಪಿನಿಂದ ನ್ಯಾಯ ದೊರಕಿಲ್ಲವೆಂದಾದರೆ ಮೇಲ್ಮನವಿ ಸಲ್ಲಿಸಲೂ ಕಾನೂನಿನಲ್ಲಿ ಅವಕಾಶವಿದ್ದು, ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವ ಯತ್ನ ಮಾಡಬಾರದು. ಜಾಲತಾಣಗಳಲ್ಲಿ ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಸಂದೇಶಗಳನ್ನು ಹರಿಯಬಿಡುವವರ ಮೇಲೂ ಕಣ್ಣಿಟ್ಟು, ಕ್ರಮ ಕೈಗೊಳ್ಳಲಾಗುವುದು ಎಂದರು. ಸಿಪಿಐ ಸುರೇಶ ಯಳ್ಳೂರ ಮಾತನಾಡಿ, ತೀರ್ಪು ಪ್ರಕಟವಾದ ನಂತರ ಆ ಕುರಿತು ಸಂಭ್ರಮಾಚರಣೆ ನಡೆಸುವುದಾಗಲೀ, ವಿರೋಧ ವ್ಯಕ್ತಪಡಿಸುವುದಾಗಲೀ ಮಾಡಬಾರದು. ಅಂತಹ ಕಾರ್ಯ ಮಾಡಿದವರ ವಿರುದ್ಧ ದೇಶದ್ರೋಹ ಹಾಗೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಮಹಮ್ಮದ್ ಗೌಸ್, ರಾಮು ನಾಯ್ಕ, ಪ್ರಸಾದ ಹೆಗಡೆ, ದೋಂಡು ಪಾಟೀಲ, ನಾರಾಯಣ ನಾಯಕ ಮುಂತಾದವರು ಮಾತನಾಡಿ, ತೀರ್ಪು ಯಾರ ಪರವಾಗಿ ಬಂದರೂ ಶಾಂತಿಭಂಗ ಉಂಟಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದರು.