ಶವ ಸಂಸ್ಕಾರಕ್ಕೆ ಸ್ಥಳವಿಲ್ಲದೆ ಪ್ರತಿಭಟನೆ ನಡೆಸಿದ ದಲಿತರು

Published on

ರಾಮನಗರ: ಮೃತ ವ್ಯಕ್ತಿಯ ಶವಸಂಸ್ಕಾರಕ್ಕೆ ಊರಿನಲ್ಲಿ ಜಾಗವಿಲ್ಲ, ತಾಲೂಕು ಆಡಳಿತ ಅಂತ್ಯಕ್ರಿಯೆಗೆ ಜಾಗ ತೋರಿಸಿಕೊಡಬೇಕು ಎಂದು ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಚನ್ನಪಟ್ಟಣ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರಸಂಗ ಮಂಗಳವಾರ ನಡೆಯಿತು.

ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ದಲಿತ ಸಮುದಾಯದ ಪುಟ್ಟರಾಮಯ್ಯ (೭೦) ಎಂಬುವವರು ಸೋಮವಾರ ರಾತ್ರಿ ಮೃತಪಟ್ಟಿದ್ದರು. ಮೃತರ ಅಂತ್ಯಕ್ರಿಯೆಯನ್ನು ಈ ಹಿಂದಿನಂತೆ ನಡೆಸುತ್ತಿದ್ದ ಜಾಗದಲ್ಲಿ ನಡೆಸಲು ಏರ್ಪಾಡು ಮಾಡುವ ವೇಳೆ, ಈ ಜಾಗ ಸ್ಮಶಾನಕ್ಕೆ ಸೇರಿದಲ್ಲ, ಇಲ್ಲಿ ಅಂತ್ಯಕ್ರಿಯೆ ನಡೆಸಬಾರದು ಎಂದು ವ್ಯಕ್ತಿಯೊಬ್ಬರು ತರಕಾರು ತೆಗೆದಿದ್ದಾರೆ.

ಇದ್ದರಿಂದ ಆಕ್ರೋಶಗೊಂಡ ಮೃತರ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ದಲಿತಪರ ಹೋರಾಟಗಾರರ ಸಹಕಾರದೊಂದಿಗೆ ತಾಲೂಕು ಕಚೇರಿ ಮುಂಭಾಗ ಸ್ಮಶಾನಕ್ಕಾಗಿ ಪ್ರತಿಭಟನೆ ನಡೆಸಿದರು.

ಈ ಹಿಂದಿನಿಂದಲೂ ನಮ್ಮ ಪೂರ್ವಿಕರು ಸತ್ತಾಗ ಆ ಜಾಗದಲ್ಲೇ ಅಂತ್ಯಕ್ರಿಯೆ ನಡೆಸುತ್ತಿದ್ದೆವು. ಇದೀಗ, ಸಮುದಾಯದ ಮಂದಿ ಸತ್ತರೆ ಹೂಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ತಾಲೂಕು ಆಡಳಿತ ಸ್ಮಶಾನವನ್ನು ಗುರುತಿಸಿಕೊಡಬೇಕು. ಇಲ್ಲವಾದರೆ, ಮನೆಯ ಬಳಿ ಇರುವ ಶವವನ್ನು ತಾಲೂಕು ಕಚೇರಿ ಮುಂಭಾವ ತಂದಿಡುವುದಾಗಿ ಆಕ್ರೋಶವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಅಹವಾಲು ಆಲಿಸಿದ. ತಹಸೀಲ್ದಾರ್ ಎಲ್. ನಾಗೇಶ್ ಕೂಡಲೇ ಗ್ರಾಮಕ್ಕೆ ಬಂದು ಈ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ತಾಲೂಕಿನ ಕೆಲ ಗ್ರಾಮಗಳಲ್ಲಿ ದಲಿತ ಸಮುದಾಯಕ್ಕೆ ಸ್ಮಶಾನಕ್ಕೆ ಜಾಗವಿಲ್ಲ ಎಂಬ ಆರೋಪಗಳು ಪದೇಪದೇ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net