

ಕೊಳ್ಳೇಗಾಲ: ಪಟ್ಟಣದ ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಶ್ರೀರಾಜೇಂದ್ರ ಮಹಾಸ್ವಾಮೀಜಿ ಅವರ ಸ್ಮರಣೆ, 110ನೇ ಸಂಸ್ಥಾಪಕರ ದಿನಾಚರಣೆ, ವಚನದಿನ ಹಾಗೂ ಲಿಂಗೈಕ್ಯ ಎಂ.ಕೆ.ಪುಟ್ಟಬುದ್ಧಿ ಅವರ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದ ಮುಡಿಗುಂಡ ವಿರಕ್ತಮಠ ಮತ್ತು ಮೈಸೂರಿನ ಅರಮನೆ ಗವಿಮಠದ ಶ್ರೀಕಂಠಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿ ಕೊಳ್ಳಿ ಎಂದರು.
ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು, ಜ್ಞಾನ ಅಭಿವೃದ್ಧಿಗೆ ಅಗತ್ಯವಿರುವ ಪುಸ್ತಕಗಳನ್ನು ಓದಬೇಕು, ನಾಗರಿಕ ಸೇವಾ ಪರೀಕ್ಷೆ ತೆಗದುಕೊಂಡು ಉನ್ನತ ಅಧಿಕಾರಿಗಳಾಗಿ ಜನರ ಸೇವೆ ಮಾಡಬೇಕೆಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ನಾಗರಾಜು ಎಸ್.ಕೊಂಗರಹಳ್ಳಿ ಮಾತನಾಡಿ, ಶರಣರ ಚಿಂತನೆ ಇಂದಿಗೂ ಪ್ರಸ್ತುತವಾಗಿದ್ದು ವಿದ್ಯಾರ್ಥಿಗಳು ಶರಣರ ವಚನಗಳನ್ನು ಕಲಿಯಬೇಕಿದೆ ಎಂದರು.
ಆದರ್ಶ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಎಸ್. ನಾಗರಾಜು, ಮೈಸೂರು ಜೆಎಸ್‌ಎಸ್ ಕಾನೂನು ಕಾಲೇಜು ನಿವೃತ್ತ ಪ್ರಾಧ್ಯಾಪಕ ಎಂ.ಪಿ.ನಾಗೇಂದ್ರಮೂರ್ತಿ ಹಾಗೂ ವಿದ್ಯಾರ್ಥಿಗಳು ಇದ್ದರು.