

ಮೇಲುಕೋಟೆ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಬಳಿ ಭಾರತಿ ವಿಷ್ಣುವರ್ಧನ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಫ್ ಸೌತ್ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಶನಿವಾರ ಉದ್ಘಾಟಿಸಿದರು.
ಮೇಲುಕೋಟೆ ದೇವಾಲಯದ ಬಳಿ ಡಾ.ವಿಷ್ಣುವರ್ಧನ್ ನಿರ್ಮಿಸಿದ್ದ ಕುಡಿಯುವ ನೀರಿನ ಘಟಕ ಶಿಥಿಲಾವಸ್ಥೆ ತಲುಪಿದ್ದ ಕಾರಣ ದೇವಾಲಯದ ಪಕ್ಕದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ನಟ ಅನಿರುದ್ಧ ಹಾಗೂ ಭಾರತಿ ವಿಷ್ಣುವರ್ಧನ್ ಸಹಕಾರ ಪಡೆದು ಬೆಂಗಳೂರಿನ ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೌತ್ 319 ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಶನಿವಾರ ಚಾಲನೆ ನೀಡಲಾಯಿತು.
ಮೇಲುಕೋಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಶೌಚಗೃಹ ಹಾಗೂ ಇತರ ಮೂಲ ಸೌಕರ್ಯ ಕಲ್ಪಿಸಲು ಭಕ್ತರು ಹಾಗೂ ದಾನಿಗಳು ಸಹಕಾರ ನೀಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದ ಅವರು, ಇನ್ನರ್ ವ್ಹೀಲ್ ಮಹಿಳಾಮಣಿಗಳ ಕೊಡುಗೆ ಸ್ಮರಣೀಯವಾದುದು ಎಂದರು.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಜಿಲ್ಲಾಧ್ಯಕ್ಷೆ ರೇಖಾ ಶ್ರೀಧರ್ ಮತ್ತು ಪದಾಧಿಕಾರಿಗಳು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್, ಡಾ.ಪ್ರೀತಿ ಮಹದೇವ್, ಸ್ಥಾನೀಕಂ ಸಂತಾನರಾಮನ್, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಪರಮೇಶ್‌ಗೌಡ ಮತ್ತಿತರರು ಭಾಗವಹಿಸಿದ್ದರು.