ಶಕ್ತಿ ದೇವತೆ ದರ್ಶನಕ್ಕೆ ಶಕ್ತಿ ಫಲಾನುಭವಿಗಳು ದಂಡು !

BKT-16-11
ಉಚಿತ ಬಸ್ ಹಾಗೂ ವಿಕೆಂಡ್ ಹಿನ್ನಲೆ ಭಾನುವಾರ ಬಾದಾಮಿ ತಾಲೂಕಿನ ಶಕ್ತಿ ಪೀಠಗಳಲ್ಲಿ ಒಂದಾದ ಬನಶಂಕರಿ ದೇವಸ್ಥಾನದ ಆವರಣ ಮಹಿಳೆಯರಿಂದ ತುಂಬಿ ತುಳುಕುತ್ತಿತ್ತು.
Published on

ಬಾಗಲಕೋಟೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಶಕ್ತಿ ಯೋಜನೆಯನ್ನು ನಾರಿಯರು ಶಕ್ತಿ ಮೀರಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪರಿಣಾಮ ರಜೆಯ ದಿನಗಳಲ್ಲಿ ಪ್ರವಾಸಿ ತಾಣಗಳು ಮಹಿಳೆಯರು ತುಂಬಿ ತುಳಕುತ್ತಿದ್ದಾರೆ.

ಫ್ರೀ ಬಸ್ ಹಾಗೂ ವಿಕೆಂಡ್ ಹಿನ್ನೆಲೆಯಲ್ಲಿ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ದಂಡು ದಂಡಾಗಿ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಬೆಳಗ್ಗೆಯಿಂದಲೇ ದೇಗುಲ ಸಂಪೂರ್ಣ ಮಹಿಳಾಮಯ ಆಗಿತ್ತು.

ಜಿಲ್ಲೆ ಮಾತ್ರವಲ್ಲದೇ ವಿಜಯಪುರ, ಧಾರವಾಡ, ಬೆಳಗಾವಿ, ಕೊಪ್ಪಳ, ಗದಗ, ಕಲಬುರಗಿ, ರಾಯಚೂರ ಸೇರಿದಂತೆ ರಾಜ್ಯ ಮೂಲೆ ಮೂಲೆಗಳಿಂದ ಮಹಿಳೆಯರು ಬನಶಂಕರಿ ಹಾಗೂ ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ ಹೀಗೆ ವಿವಿಧೆಡೆ ಪ್ರವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಬಾದಾಮಿ ಗೆ ಬರುತ್ತಿದ್ದ ಎಲ್ಲ ಬಸ್ ಗಳು ಹೌಸ್ ಪುಲ್ ಆಗಿ ಬರುತ್ತಿದ್ದವು.

ಬನಶಂಕರಿ ದೇವಸ್ಥಾನದಲ್ಲಿ ಸಾಮನ್ಯವಾಗಿ ಪ್ರತಿ ದಿನ ಎರಡರಿಂದ ಎರಡುವರೆ ಸಾವಿರ ಭಕ್ತರು ಬರುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಭಕ್ತರು ಸಂಖ್ಯೆ ಎಂಟತ್ತು ಸಾವಿರ ಆಗುತ್ತಿದೆ. ಇದರಲ್ಲಿ ಶೇ. ೭೫ ರಿಂದ ೮೦ ರಷ್ಟು ಮಹಿಳಾ ಭಕ್ತರು ಎನ್ನುವುದು ಗಮನಾರ್ಹ. ಈ ಭಾನುವಾರ ಸಹ ದೇಗುಲಕ್ಕೆ ಎಂಟತ್ತು ಸಾವಿರ ಭಕ್ತರು ಭೇಟಿ ನೀಡಿದ್ದರು. ದೇವಿಯ ದರ್ಶನ ಹಾಗೂ ಉಚಿತ ಪ್ರಸಾದಕ್ಕೆ ಹೆಚ್ಚಿನ ಭಕ್ತರು ದಂಡು ದಂಡಾಗಿ ಬರುತ್ತಿದ್ದ ದೃಶ್ಯ ಸಹ ಸಾಮಾನ್ಯವಾಗಿತ್ತು.

ಉಚಿತ ದಾಸೋಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ದೇವಸ್ಥಾನದ ಟ್ರಸ್ಟ್ ನವರು ಸಹ ಇದೀಗ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಎಂಟತ್ತು ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net