ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿ ನಿಲಯ ಸಹಕಾರಿ

ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿ ನಿಲಯ ಸಹಕಾರಿ
Published on

ಚನ್ನರಾಯಪಟ್ಟಣ: ವಿದ್ಯಾರ್ಥಿ ನಿಲಯದ ನಿರ್ಮಾಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್ ಹಿಂಭಾಗದಲ್ಲಿ ಅಂದಾಜು 6.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಸತಿ ಸೌಲಭ್ಯದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಪಟ್ಟಣದ ಹೃದಯ ಭಾಗದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸುಮಾರು 200 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎರಡು ವಸತಿ ನಿಲಯಗಳನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸರ್ಕಾರ ನೀಡುವ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

ಪಟ್ಟಣದಲ್ಲಿ ಹಾಸ್ಟೆಲ್ ಆರಂಭಿಸಬೇಕು ಎಂಬ ಬಹುದಿನದ ಆಸೆ ಈಡೇರುತ್ತಿದೆ. ಪರಿಶಿಷ್ಟಜಾತಿ, ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನಿರ್ಮಾಣದಿಂದ ಅಂದಾಜು 100 ವಿದ್ಯಾರ್ಥಿನಿಯರಿಗೆ ಪ್ರಯೋಜನವಾಗಲಿದೆ. ಉತ್ತಮ ವಾತಾವರಣದಲ್ಲಿ ನಿಲಯ ನಿರ್ಮಿಸಲಾಗುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂದು ಗುತ್ತಿಗೆದಾರರ ಗಮನಕ್ಕೆ ತಂದರು.

ಪುರಸಭಾಧ್ಯಕ್ಷೆ ಕೆ.ಎನ್.ಬನಶಂಕರಿ, ಉಪಾಧ್ಯಕ್ಷೆ ರಾಣೆ, ಸದಸ್ಯ ದಶಣೇಶ್, ಯೋಗೀಶ್, ಗಣೇಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರುಕ್ಕಿಣೆ. ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎನ್. ಸತೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್. ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net