

ಬಾಗಲಕೋಟೆ: ಮಹಾಮಾರಿ ಕರೊನಾದಿಂದ ಆತಂಕ ತಪ್ಪಿ ಕಳೆದ ಒಂದು ವರ್ಷದಿಂದ ವ್ಯಾಪಾರ ವಹಿವಾಟು ಚೇತರಿಕೆ ಕಂಡಿತ್ತು, ಹಬ್ಬಗಳ ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ನೆಮ್ಮದಿ ಉಂಟು ಮಾಡಿತ್ತು. ಆದರೇ ಪ್ರಸಕ್ತ ವರ್ಷ ಪಾಕೃತಿಕ ವಿಕೋಪದಿಂದ ಕೋಟೆನಾಡಿನಲ್ಲಿ ಮಾರುಕಟ್ಟೆ ವಹಿವಾಟಿನ ಮೇಲೆ ಸಿಹಿ-ಕಹಿ ಉಂಟು ಮಾಡಿದೆ. ಬೆಲೆ ಏರಿಕೆಯು ಗ್ರಾಹಕರನ್ನು ತಲ್ಲಣಗೊಳಿಸಿದೆ.
ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರ ಹಾಗೂ ಮುಧೋಳ, ಜಮಖಂಡಿ, ಬೀಳಗಿ, ಲೋಕಾಪುರ, ಬಾದಾಮಿ, ಹುನಗುಂದ, ಗುಳೇದಗುಡ್ಡ, ಇಳಕಲ್ಲ, ಕಮತಗಿ, ಅಮೀನಗಡ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶ ಮಾರುಕಟ್ಟೆಯಲ್ಲಿ ಜನ ಜಂಗಳಿ ಕಂಡು ಬಂದಿದೆ. ಬೆಳಕಿನ ಹಬ್ಬ ದೀಪಾವಳಿ ವ್ಯಾಪಾರ ವಹಿವಾಟಿಗೆ ಉತ್ತಮ ನಂಟು ಇದೆ. ಆದರೇ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಆಗುತ್ತಿಲ್ಲ. ಇದರಿಂದ ನೋವು ವ್ಯಾಪಾರಸ್ಥರರಲ್ಲಿ ಬೇಸರ ಮೂಡಿಸಿದೆ.
ಯಾವುದು ಉತ್ತಮ-ಯಾವುದು ನಷ್ಟ..?
ಗಣೇಶ ಉತ್ಸವ, ದಸಾರ ವೇಳೆ ಇದ್ದ ವಹಿವಾಟು ದೀಪಾವಳಿ ಕುಸಿದಿರುವುದು ಆತಂಕ ಮೂಡಿಸಿದೆ. ಶೇ.೫೦ ವಹಿವಾಟು ಕಡಿಮೆಯಾಗಿದೆ. ಕೆಲವು ಬಂಡವಾಳ ನಷ್ಟ ಸರಿದೂಗಿಸಲು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ವಿವಿಧ ಕಂಪನಿಗಳ ಬ್ಯ್ರಾಡೆಂಡ್ ಮಳಿಗೆಗಳು ಲಗ್ಗೆ ಇಟ್ಟಿರಿಂದ ಸಾಮಾನ್ಯ ಬಟ್ಟೆ ಅಂಗಡಿಗಳಲ್ಲಿ ಜನರು ಖರೀದಿಗೆ ಬರುತ್ತಿಲ್ಲ. ಲಕ್ಷಾಂತರ ರೂ. ಬಂಡವಾಳ ಹಾಕಿ ಮುಂಬಯಿ, ಹೈದ್ರಾರಾಬಾದ್ ಸೇರಿದಂತೆ ವಿವಿಧೆಡೆಯಿಂದ ಆಮದು ಮಾಡಿಕೊಂಡ ನಾನಾ ಬಟ್ಟೆಗಳು ನಿರೀಕ್ಷೆ ಮಟ್ಟದಲ್ಲಿ ಮಾರಾಟವಾಗುತ್ತಿಲ್ಲ. ಕಿರಾಣಿ ಮಾರುಕಟ್ಟೆ ಕ್ಷೇತ್ರವಂತು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ವಾಹನ, ಗೃಹ ಉಪಯೋಗಿ ವಸ್ತುಗಳ ಮಳಿಗಳ ಪರಿಸ್ಥಿತಿ ವಿಭಿನ್ನವಾಗಿಲ್ಲ. ಆದರೇ ಚಿನ್ನಾಭರಣ ಕ್ಷೇತ್ರಕ್ಕೆ ಬಂಪರ್ ವಹಿವಾಟು ಕಂಡು ಬಂದಿದೆ. ಈ ಸಾರಿ ದೀಪಾವಳಿ ಹಬ್ಬವು ವ್ಯಾಪಾರಸ್ಥರಿಗೆ ಮಿಶ್ರ ಫಲ ನೀಡಿದೆ. ಕೆಲವು ವ್ಯಾಪಾರಸ್ಥರಿಗೆ ಅನುಕೂಲವಾದರೇ, ಹಲವರಿಗೆ ನಷ್ಟ ಉಂಟು ಮಾಡಿದೆ. ಆದರೇ ಹಬ್ಬದ ನಂತರವು ಮುಂದಿನ ದಿನಗಳಲ್ಲಿ ಮಾರುಕಟ್ಟೆ ವಹಿವಾಟು ಗತ ವೈಭವ ಕಾಣುತ್ತಾ ಕಾದು ನೋಡಬೇಕು.
ಕಾರಣವೇನು? ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅಽಕ ಮಳೆಯಿಂದಾಗಿ ರೈತಾಪಿ ವರ್ಗ ನಷ್ಟದಲ್ಲಿದೆ. ಹಿಂಗಾರಿ ಬಿತ್ತನೆಗೂ ಬೀಜ, ಗೊಬ್ಬರ ಖರೀದಿಗೆ ಒದ್ದಾಡುತ್ತಿದ್ದಾರೆ. ಕೈ ತುಂಬು ಕಾಸು ನೀಡುತ್ತಿದ್ದ ಈರುಳ್ಳಿ, ಗೋವಿನ ಜೋಳ ಕೈ ಕೊಟ್ಟಿದ್ದರಿಂದ ಅನ್ನದಾತರು ಮಾರುಕಟ್ಟೆಯತ್ತ ಮುಖಮಾಡುತ್ತಿಲ್ಲ. ದೀಪಾವಳಿ ಹಬ್ಬ ಈ ಸಾರಿ ತಿಂಗಳ ಕೊನೆಯಲ್ಲಿ ಬಂದಿದ್ದರಿಂದ ಕಾರ್ಮಿಕರು, ನೌಕರಸ್ಥರ ಹಿಂದೇಟಿಗೆ ಕಾರಣವಾಗಿದೆ. ಪ್ರಮುಖ ಪ್ರಾಕೃತಿಕ ವಿಕೋಪದಿಂದ ವ್ಯಾಪಾರದ ಮೇಲೆ ಕರಿ ನೆರಳು ಆವರಿಸಿದೆ.
ಬೆಲೆ ಏರಿಕೆ ಬಿಸಿ:ಇನ್ನು ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆಯೂ ಗಗನಕ್ಕೆ ಏರಿದೆ. ಗ್ರಾಹಕರು ಖರೀದಿ ಮಾಡುವಾಗ ನೊರೆಂಟು ಸಾರಿ ವಿಚಾರ ಮಾಡುವಂತಾಗಿದೆ. ಹೂ, ಹಣ್ಣು, ಕಾಯಿ, ಪೂಜಾ ಸಾಮಗ್ರಿ, ಬಾಳೆದಿಂಡು, ಆಕಾಶಪುಟ್ಟಿ, ಬಟ್ಟೆಗಳ ಬೆಲೆಯು ದುಪ್ಪಟ್ಟಾಗಿದೆ. ಬೆಲೆ ಕೇಳಿಯೇ ಗ್ರಾಹಕರು ಸುಸ್ತು ಹೊಡೆಯುತ್ತಿದ್ದಾರೆ.