

ಅಕ್ಕಿಆಲೂರ: ಪಟ್ಟಣದ ಜ್ಞಾನ ಭಾರತಿ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಸಂತೆ ಎಲ್ಲರ ಗಮನ ಸೆಳೆಯಿತು.
350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಗಡಿಗಳನ್ನು ಹಚ್ಚಿಕೊಂಡು ವ್ಯಾಪಾರ-ವಹಿವಾಟು ನಡೆಸಿದರು. ದಿನಸಿ ವಸ್ತುಗಳು, ತರಕಾರಿ, ಹೂವು, ಹಣ್ಣು, ಹಾಲು, ಬಟ್ಟೆ, ಬೀದಿ ಬದಿಯ ತಿನಿಸಿಗಳು, ಹೆಣ್ಣುಮಕ್ಕಳ ಫ್ಯಾಶನ್ ವಸ್ತ್ರಾಭರಣಗಳು, ಪತಂಜಲಿ ಉತ್ಪನ್ನಗಳು ಸೇರಿ ಹಲವಾರು ಬಗೆಯ ವಸ್ತುಗಳ ಅಂಗಡಿಗಳಲ್ಲಿ ಮಕ್ಕಳು ವ್ಯಾಪಾರ ನಡೆಸಿದರು. ಅಕ್ಕಿಆಲೂರ ಹಾಗೂ ಸುತ್ತಲಿನ ಗ್ರಾಮಗಳ ಪಾಲಕರು ಮತ್ತು ಸಾರ್ವಜನಿಕರು ವಸ್ತುಗಳನ್ನು ಖರೀದಿಸಿದರು.
ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ ಶೇಷಗಿರಿ, ‘ವಿದ್ಯೆಯೊಂದಿಗೆ ಮಾರುಕಟ್ಟೆಯ ಜ್ಞಾನ ಹೊಂದಿದಾಗ ಮಾತ್ರ ಮಗುವಿನಲ್ಲಿ ಸಾಮಾಜಿಕ ಬೆಳವಣಿಗೆ ಲಕ್ಷಣಗಳು ಗೋಚರಿಸುತ್ತವೆ. ವಿದ್ಯಾರ್ಥಿ ದೆಸೆಯಲ್ಲೇ ವ್ಯವಹಾರ, ಉದ್ಯಮಶೀಲತೆ ಕುರಿತು ಅಗತ್ಯ ಶಿಕ್ಷಣ ನೀಡಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಕೆ.ಎಸ್. ಕುಂಬಾರ, ಪತ್ರಕರ್ತ ಕಿರಣ ಹೂಗಾರ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಆಡಳಿತ ಮಂಡಳಿಯ ಕೃಷ್ಣಪ್ಪ ಆಲದಕಟ್ಟಿ, ವಿ.ಪಿ. ಗುರಪ್ಪನವರ, ಆರ್.ಜಿ. ಗುಡಿಕೇರಿ, ಮನೋಹರ ಗೊಂದಿ, ಶಿಕ್ಷಕರಾದ ಮಂಜುನಾಥ ಹಾವೇರಿ, ಜಿ.ಎಂ. ಅಂಗಡಿ, ಬಸವರಾಜ ನೆಲ್ಲಿಕೊಪ್ಪ, ವಿ.ಎಂ. ತಳವಾರ, ಜಿ.ಬಿ. ರಾಯಚೂರ, ಎಸ್.ಎಚ್. ಬಿದರಕೊಪ್ಪ, ನಂದಿನಿ ಕೆ.ಬಿ., ಹೀನಾಕೌಸರ ಮನ್ನಂಗಿ, ಜ್ಯೋತಿ ಲಮಾಣಿ, ವಾಣಿ ಸುಗಂಧಿ, ಸುನಿತ ಗಾಣಗೇರ, ಪವಿತ್ರ ಎಸ್.ಎಸ್. ಉಪಸ್ಥಿತರಿದ್ದರು.