

ಆಲೂರು: ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷೆ ಎಂ.ಬಿ.ಗಿರಿಜಾಂಬಿಕಾ ಅಭಿಪ್ರಾಯಪಟ್ಟರು.
ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಎಸ್‌ವಿ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವತಿಯಿಂದ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದು ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆ ಬೋಧಿಸಿದ ಶ್ರೇಷ್ಠ ವ್ಯಕ್ತಿತ್ವದ ಶ್ರೀಕೃಷ್ಣನನ್ನು ನೆನೆಯುವ ಸುದಿನ ಇದಾಗಿದೆ. ಮಕ್ಕಳು ಕೃಷ್ಣ, ರಾಧೆಯರ ವೇಷಭೂಷಣ ಧರಿಸಿ ಬಾಲಕೃಷ್ಣ-ರಾಧೆಯರಂತೆ ಕಂಗೊಳಿಸುತ್ತಿದ್ದಾರೆ. ದಿನಕ್ಕೊಂದು ಒಳ್ಳೆಯ ಕೆಲಸ ಮಾಡುತ್ತಾ ಮಕ್ಕಳು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಶಾಲೆಯ ಮುಖ್ಯಸ್ಥ ಬಿ.ಜಿ.ಗಿರೀಶ್ ಮಾತನಾಡಿ, ಶ್ರೀಕೃಷ್ಣನು ಬೋಧಿಸಿದ ಮಾನವೀಯ ಮೌಲ್ಯಗಳು ಸಾರ್ವಕಾಲಿಕವಾದದ್ದು. ಮಾನವ ಧರ್ಮ ರಕ್ಷಣೆಗಾಗಿ ಅವತರಿಸಿದ ಶ್ರೀಕೃಷ್ಣ ಭಗವದ್ಗೀತೆ ಇಂದಿಗೂ ನ್ಯಾಯಾಲಯಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಇದೊಂದು ಸರ್ವಶ್ರೇಷ್ಠ ಗ್ರಂಥವಾಗಿದೆ. ಇಂತಹ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ವೇಷಭೂಷಣ ಸ್ಪರ್ಧೆಯಲ್ಲಿ ಭರತ್ ಡಿ. ಪ್ರಥಮ ಸ್ಥಾನ, ಸಿದವೀರ್ ಪ್ರತಾಪ್ ದ್ವಿತೀಯ ಸ್ಥಾನ, ಪರಮಶಿವ ತೃತೀಯ ಸ್ಥಾನ, ರೇವಂತ್ ಕುಮಾರ್ ಹಾಗೂ ರಚಿತ್‌ಗೌಡ ಸಮಾಧಾನಕರ ಬಹುಮಾನ ಪಡೆದರು.
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ಕಬ್ ಮಾಸ್ಟರ್ ದೇವರಾಜ್, ಸ್ಕೌಟ್ ಮಾಸ್ಟರ್ ಸತೀಶ್, ಗೈಡ್ಸ್ ಕ್ಯಾಪ್ಟನ್ ಸುಮಿತ್ರಾ, ಪೃಥ್ವಿನಿ ಉಪಸ್ಥಿತರಿದ್ದರು.