

ಶನಿವಾರಸಂತೆ: ಪ್ರತಿಯೊಬ್ಬರ ಜೀವನದಲ್ಲಿ ವ್ಯಕ್ತಿತ್ವ ರೂಪಿಸುವ ಹುಟ್ಟೂರನ್ನು ಯಾವತ್ತೂ ಮರೆಯಬಾರದು ಎಂದು ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಮಹೇಶ್ ಸಲಹೆ ನೀಡಿದರು.
ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಿತ್ತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಸಮಾಜದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದ ವ್ಯಕ್ತಿಯಾಗಿದ್ದರೂ ತನಗೆ ಜನ್ಮಕೊಟ್ಟ ಅಮ್ಮನ ಮಡಿಲು, ಅಪ್ಪನ ಹೆಗಲು, ತಾನು ನಡೆದುಬಂದ ಹಾದಿ ಹಾಗೂ ತಾನು ಹುಟ್ಟಿದ ಊರನ್ನು ಯಾವತ್ತೂ ಮರೆಯಬಾರದು ಎಂದು ಹೇಳಿದರು.
ಪ್ರತಿಯೊಬ್ಬರ ಜೀವನದಲ್ಲಿ ತಾನು ಹುಟ್ಟಿದ ಊರು ವ್ಯಕ್ತಿತ್ವವನ್ನು ರೂಪಿಸುತ್ತದೆ. ಇಲ್ಲಿಂದಲೇ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇದರಿಂದಲೆ ವ್ಯಕ್ತಿ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಗೆ, ತನ್ನ ಊರಿನ ಬಗ್ಗೆ ಹೆಮ್ಮೆ ಹಾಗೂ ಗೌರವ ಕೊಡುವ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಇ.ಎಂ.ದಯಾನಂದ್, ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಕಲಿತುಕೊಂಡಿದನ್ನು ತನ್ನ ಜೀವನದ ಉದ್ದಕ್ಕೂ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಮುಂದೆ ಸಮಾಜದಲ್ಲಿ ಉತ್ತಮ ಜೀವನ ನಡೆಸುವಂತೆ ಸಲಹೆ ನೀಡಿದರು.
ನಿವೃತ್ತ ಸೈನಿಕ ಕೆ.ವಿ.ಮಂಜುನಾಥ್, ಹಂಡ್ಲಿ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್, ರಾ.ಸೇ.ಯೋಜನಾಧಿಕಾರಿ ಎನ್.ಎಂ.ಹರೀಶ್, ಉಪನ್ಯಾಸಕರಾದ ಮೋಹನ್‌ಕುಮಾರ್, ಎಚ್.ಎಂ.ವಿವೇಕ್, ಬಿ.ಎಂ.ಪೊನ್ನಪ್ಪ, ಗ್ರಾಮಸ್ಥ ಗಣೇಶ್ ಕೆಳಗಳಲೆ ಮುಂತಾದವರು ಹಾಜರಿದ್ದರು.