

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಒಂದು ದೇಶ ಒಂದು ಕೃಷಿ ಒಂದು ತಂಡ ಧ್ಯೇಯದೊಂದಿಗೆ ಕೇಂದ್ರ ಸರ್ಕಾರದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಅಡಿಯಲ್ಲಿ ಕೃಷಿ ವಿಜ್ಞಾನಿಗಳನ್ನು ರೈತರ ಹತ್ತಿರ ತರುವಂತಹ ಕೆಲಸ ನಡೆಯುತ್ತಿದೆ. ನೂತನ ಸಂಶೋಧನೆ, ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಯ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಲಾಭದಾಯಕ ಕ್ಷೇತ್ರ ನಿರ್ಮಿಸುವುದು ನಮ್ಮ ಉದ್ದೇಶ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಜೂ.12ರವರೆಗೆ ನಡೆಯಲಿರುವ "ವಿಕಸಿತ ಕೃಷಿ ಸಂಕಲ್ಪ ಅಭಿಯಾನ' ಹಿನ್ನೆಲೆಯಲ್ಲಿ ಹೆಸರಟ್ಟದ ಐಸಿಎಆರ್&ಐಐಎಚ್ಆರ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಪಾರಂಪರಿಕ ಕೃಷಿಗೆ ಸೀಮಿತವಾಗದೆ ವೈವಿಧ್ಯಮಯ ಕೃಷಿ, ಪ್ರೊಸೆಸಿಂಗ್ ಮತ್ತು ರಫ್ತು ಸಾಧನೆಗಳತ್ತ ಗಮನ ಹರಿಸಬೇಕಿದ್ದು, ಭಾರತವು ವಿಶ್ವದ ಆಹಾರ ಬುಟ್ಟಿಯಾಗಬೇಕು. ದೇಶದ 143 ಕೋಟಿಗೂ ಅಧಿಕ ಜನರಿಗೆ ಆಹಾರ ಬೇಕು. ಕೃಷಿ ಭಾರತದ ಜಿಡಿಪಿಯ ಸುಮಾರು ಶೇ.18 ರಷ್ಟಿದ್ದರೂ, ಇದು ಜನಸಂಖ್ಯೆಯ ಸುಮಾರು ಶೇ.50 ಜನರನ್ನು ಅಷ್ಟೇ ಆವರಸಿಕೊಂಡಿದೆ. ಇತ್ತೀಚೆಗೆ ಶೇ.5.41 ತ್ರೆಮಾಸಿಕ ಬೆಳವಣಿಗೆಯ ದರದೊಂದಿಗೆ ನಾವೀನ್ಯತೆ ಮತ್ತು ಸರ್ಕಾರದ ಬೆಂಬಲದ ಮೂಲಕ ಕೃಷಿ ತ್ವರಿತ ಪ್ರಗತಿಗೆ ಸಿದ್ಧವಾಗಿದೆ. ಜತೆಗೆ ಕೃಷಿ ಕ್ಷೇತ್ರವನ್ನು ವಿಸ್ತರಣೆ ಮಾಡುವುದು, ಇದರಿಂದ ಲಾಭ ಮಾಡುವುದು ಅನಿವಾರ್ಯವಾಗಿದೆ ಎಂದರು. ಯಾವ ಕಾಲದಲ್ಲಿ ಎಂಥ ಬೆಳೆ ಬೆಳೆಯಬೇಕು, ರಾಸಾಯನಿಕ ಪದಾರ್ಥಗಳನ್ನು ದೂರ ಮಾಡಿ, ಸಾಂಪ್ರದಾಯಕದಿಂದ ಹೊರಬಂದು ನೂತನ ತಂತ್ರಜ್ಞಾನ ಆಧಾರಿತವಾಗಿ ಬೆಳೆಯುವ ಕೌಶಲ ಕಲಿತುಕೊಳ್ಳಬೇಕು. ಈಗಾಗಲೇ ದೇಶಾದ್ಯಂತ 16 ಸಾವಿರ ರೈತರ ಬಳಿ ವಿಜ್ಞಾನಿಗಳು ಹೋಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ, ನೂತನ ತಂತ್ರಗಳನ್ನು ತಿಳಿಸಲಾಗಿದ್ದು, ಈ ಅಭಿಯಾನ ದಾಖಲೆಯಾಗಿದೆ. ಮುಂದೆಯೂ ಕೃಷಿ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಿಗೆ ಕೆಲಸ ಮಾಡಬೇಕು. ಒಂದು ದೇಶ ಒಂದು ಕೃಷಿ ಒಂದು ತಂಡ ನೀತಿಯಂತೆ ರೈತರ ಹಾಗೂ ಕೃಷಿಯ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ರತ್ನಮ್ಮ, ಶ್ರೀನಿವಾಸನ್, ಗೋಪಾಲಗೌಡ, ಪದ್ಮಿನಿ ಗೌಡ, ಎಚ್.ಆರ್. ರು, ಮಂಗಳಮ್ಮ ಹಾಗೂ ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಸಂಸದ ಡಾ.ಕೆ. ಸುದಾಕರ್, ಶಾಸಕ ಎಸ್.ಆರ್. ವಿಶ್ವನಾಥ್, ತೋಟಗಾರಿಕೆ ಸಂಸ್ಥೆ ಮಹಾನಿರ್ದೇಶಕ ಡಾ. ಎಸ್.ಕೆ. ಸಿಂಗ್, ಐಸಿಎಆರ್ ಪ್ರಧಾನ ಕಚೇರಿಯ ಉಪ ಮಹಾನಿರ್ದೇಶಕ ಡಾ. ರಾಘವೇಂದ್ರ ಭಟ್ಟ, ತೋಟಗಾರಿಕೆ ಸಂಸ್ಥೆ ನಿರ್ದೇಶಕ ಡಾ.ವಿ. ಸುಬ್ರಮಣ್ಯಂ, ಐಸಿಎಆರ್&ಐಐಎಚ್ಆರ್ ನಿರ್ದೇಶಕ ಡಾ. ತುಸಾರ್ ಕಾಂತಿ ಬೆಹರಾ ಮತ್ತಿತರರು ಇದ್ದರು.
ಸದ್ಯ ಡ್ರ್ಯಾಗನ್ ಫ್ರೂಟ್ ಇಳುವರಿ ಹೆಚ್ಚಿದೆ. ಆದರೆ ಮಾರುಕಟ್ಟೆಗಳು ಸವಾಲಾಗಿವೆ. ಹಣ್ಣಿನಿಂದ ಹಲವು ರೀತಿಯ ಉತ್ಪನ್ನಗಳನ್ನು ತಯಾರಿಸಬಹುದು. ರಾಜ್ಯದಲ್ಲಿ 650 ಕಮಲಂ ಹಣ್ಣಿನ ಬೆಳೆಗಾರರಿದ್ದು, 45 ಸಾವಿರ ಮೆಟ್ರಿಕ್ ಟನ್ ಅಧಿಕ ಪೂರೈಕೆಯಾಗುತ್ತಿದೆ. ಈ ಹಣ್ಣಿನಲ್ಲಿ ಹಲವು ರೋಗ ನಿರೋಧಕ ಶಕ್ತಿ ಅಡಕವಾಗಿದ್ದು, ಶುಗರ್, ಬೊಜ್ಜು, ಹೃದಯ ಸಂಬಂಧಿ ಕಾಯಿಲೆಗೆ ಮದ್ದಾಗಿದೆ. > ಅರುಣ, ಕಮಲಂ ಹಣ್ಣು ಬೆಳೆಗಾರ
ಕಮಲಂ ಕೇಕ್, ಐಸ್ಕ್ರೀಂ ಸವಿದ ಸಚಿವ ಕಮಲಂ (ಡ್ರ್ಯಾಗನ್ ಫ್ರೂಟ್) ಕೃಷಿಯಿಂದ ರೈತರು 3 ವರ್ಷಗಳಲ್ಲಿ ಎಕರೆಗೆ 6&7 ಲಕ್ಷ ರೂ. ಲಾಭ ಗಳಿಸುತ್ತಿದ್ದಾರೆ ಎಂದು ಸಚಿವರು ಭಾಷಣದಲ್ಲಿ ತಿಳಿಸಿ ಹೆಮ್ಮೆಪಟ್ಟರು. ಕಾರ್ಯಕ್ರಮಕ್ಕೂ ಮೊದಲು ಕಮಲಂ ಹಣ್ಣು ಬೆಳೆ ಪ್ರದೇಶಕ್ಕೆ (ಡಿಸಿಪಿ ದೇವರಾಜ ಅವರ 5 ಎಕರೆ ತೋಟ) ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಕಮಲಂ ಹಣ್ಣಿನಿಂದ ಉತ್ಪಾದಿಸುವ ಕೇಕ್, ಐಸ್ಕ್ರೀಂ ಇತ್ಯಾದಿ ಖಾದ್ಯಗಳನ್ನು ಸವಿದರು. ಬಳಿಕ ಟೊಮ್ಯಾಟೋ ಬೆಳೆ ಪ್ರದೇಶಕ್ಕೆ ತೆರಳಿ ರೈತರ ಅಹವಾಲುಗಳನ್ನು ಆಲಿಸಿದರು. ಸದ್ಯ ದರದಲ್ಲಿ ಉಂಟಾಗುತ್ತಿರುವ ಏರುಪೇರುಗಳ ಕುರಿತು ಚರ್ಚಿಸಿದರು.
ತೋಟಗಾರಿಕಾ ವಸ್ತುಗಳ ಪ್ರದರ್ಶನ
ಐಸಿಎಆರ್&ಐಐಎಚ್ಆರ್ ಆವರಣದಲ್ಲಿ ಮಾವು, ಹೂವುಗಳು, ತರಕಾರಿಗಳು ಮತ್ತು ಔಷಧೀಯ ಸಸ್ಯಗಳ ಪ್ರದರ್ಶನವನ್ನು ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದರು. ಹವಾಮಾನ- ನಿರೋಧಕ ಬೆಳೆ ಪ್ರಭೇದಗಳು, ಕೊಯ್ಲಿನ ನಂತರದ ನಿರ್ವಹಣೆ ಮತ್ತು ತಂತ್ರಜ್ಞಾನಗಳು, ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ತಂತ್ರಗಳು, ಜೇನುಸಾಕಣೆ ಮತ್ತು ಅಣಬೆ ಕೃಷಿಯಲ್ಲಿನ ನಾವೀನ್ಯತೆಗಳು, ಔಷಧೀಯ ಮತ್ತು ಆರೊಮ್ಯಾಟಿಕ್ ಸಸ್ಯಗಳ ಅಭಿವೃದ್ಧಿ ಕುರಿತು ವಿವಿಧ ಸಂಸ್ಥೆಗಳ ಅತ್ಯಾಧುನಿಕ ಸಂಶೋಧನಾ ಫಲಿತಾಂಶಗಳು ಪ್ರದರ್ಶನದಲ್ಲಿದ್ದವು.
ಯಶಸ್ಸಿನತ್ತ ಅಭಿಯಾನ...
ಹದಿನೈದು ದಿನಗಳ ಅಭಿಯಾನ 12 ಜೂನ್ವರೆಗೆ ನಡೆಯಲಿದೆ. ಈಗಾಗಲೇ ಈ ಅಭಿಯಾನದ ಮೂಲಕ 11 ದಿನಗಳಲ್ಲಿ ಒಡಿಶಾ, ಜಮ್ಮು, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರಾ, ಪಂಜಾಬ್, ಉತ್ತರಾಖಂಡ್ ಮತ್ತು ಮಧ್ಯಪ್ರದೇಶ ಸೇರಿ ಹಲವಾರು ರಾಜ್ಯಗಳಲ್ಲಿ ರೈತರ ಜತೆ ಸಂವಾದ ನಡೆಸಲಾಗಿದೆ.