ವೈಭವ ಅನಾವರಣಗೊಳಿಸಿದ ಕದಂಬೋತ್ಸವ

9KWR7A
Published on

ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಎರಡು ವರ್ಷಗಳ ಬಳಿಕ ಆಯೋಜಿಸಿದ್ದ ಕದಂಬೋತ್ಸವ ಯುವ ಜನರಿಗೆ ಹೊಸ ಯೋಚನೆಗೆ ಹಚ್ಚಿಸುವ, ಸಾಂಸ್ಕೃತಿಕ ಹುಮ್ಮಸ್ಸು ಮೂಡಿಸುವಲ್ಲಿ ಯಶಸ್ವಿಯಾಯಿತು.

2018 ರಲ್ಲಿ ಈ ಭಾಗದಲ್ಲಿ ಮಂಗನ ಕಾಯಿಲೆ ಆವರಿಸಿದ್ದರಿಂದ ಕದಂಬೋತ್ಸವ ರದ್ದಾಗಿತ್ತು. ಈ ಬಾರಿ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಇಲಾಖೆ ನೆರವಿನಲ್ಲಿ ಜಿಲ್ಲಾಡಳಿತ ಶನಿವಾರ ಹಾಗೂ ಭಾನುವಾರ ಅದ್ದೂರಿ ಉತ್ಸವ ಏರ್ಪಾಟು ಮಾಡಿತ್ತು.

ಕ್ರೀಡಾಪಟುಗಳಿಗಾಗಿ ಮ್ಯಾರಥಾನ್, ರೈತರಿಗಾಗಿ ಕೃಷಿ ಗೋಷ್ಠಿ, ಜಾನುವಾರು, ಶ್ವಾನ, ಫಲ-ಪುಷ್ಪ ಪ್ರದರ್ಶನಗಳು, ಮಕ್ಕಳ ಪ್ರತಿಭೆ ಅನಾವರಣಕ್ಕೆ ಚಿಣ್ಣರ ಕಲರವ, ಸಾಹಿತ್ಯಾಸಕ್ತರಿಗಾಗಿ ಕವಿ ಗೋಷ್ಠಿ, ಬನವಾಸಿ ಇತಿಹಾಸ ಅವಲೋಕನಕ್ಕೆ ಇತಿಹಾಸ ಗೋಷ್ಠಿ, ಪತ್ರಿಕೋದ್ಯಮ ಕ್ಷೇತ್ರಗಳ ಬೆಳವಣಿಗೆಗಳ ಚರ್ಚೆಗೆ ಮಾಧ್ಯಮ ಸಂವಾದ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ, ಮಹಿಳಾ ಗೋಷ್ಠಿ, ಹೀಗೆ ಮಕ್ಕಳು, ಯುವಕರು, ವೃದ್ಧರು ಮಹಿಳೆಯರು ಎಲ್ಲ ವರ್ಗದ ಜನರನ್ನು ಸೆಳೆಯುವಲ್ಲಿ ಎರಡು ದಿನಗಳ ಉತ್ಸವ ಯಶಸ್ವಿಯಾಯಿತು.

ಪಂಪ ಪ್ರಶಸ್ತಿ ರಾಜ್ಯ ಮಟ್ಟದದಾಗಿದ್ದರೂ ಅದಕ್ಕೆ ಭಾಜನರಾದ ಕೆಲವು ಸಾಹಿತಿಗಳು ಸ್ವೀಕರಿಸಲು ಇಲ್ಲಿಗೆ ಬಾರದೇ ಹಲವು ಬಾರಿ ಆಭಾಸವಾಗಿದ್ದಿದೆ. ಆದರೆ, ಈ ಬಾರಿ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರು ಉತ್ಸವಕ್ಕೆ ಬಂದು ಪ್ರಶಸ್ತಿ ಸ್ವೀಕರಿಸಿ, ಸ್ಪೂರ್ತಿದಾಯಕ ಮಾತನಾಡಿ ಉತ್ಸವಕ್ಕೆ ಮೆರುಗು ತಂದರು.

ಮನೋರಂಜನೆಯ ಸೊಬಗು: ಚುಮು ಚುಮು ಚಳಿಯಲ್ಲೂ ನೃತ್ಯ, ಸಂಗೀತ, ಜಾದು ಹೀಗೆ ವಿವಿಧ ಕಾರ್ಯಕ್ರಮಗಳು ಶನಿವಾರ ಬನವಾಸಿ ಕದಂಬೋತ್ಸವದಲ್ಲಿ ಜನಮನ ತಣಿಸಿದವು. ಎಂಜೆ 5 ನೃತ್ಯ ತಂಡ ಕೆಲವೇ ನಿಮಿಷ ನೃತ್ಯ ಮಾಡಿದರೂ ಹೆಜ್ಜೆಗಳು, ಅದ್ಭುತ ಹಿಪ್​ಹಾಪ್ ಸ್ಟಂಟ್​ಗಳು ನೋಡುಗರ ಮೈ ರೋಮಾಂಚನಗೊಳಿಸಿದವು. ಶಿರಸಿಯ ಮಕ್ಕಳ ಯಕ್ಷ ರೂಪಕ, ಯಲ್ಲಾಪುರ ಭಾರತೀಯ ಕಲಾ ಕೇಂದ್ರದ ನೃತ್ಯ ರೂಪಕ, ಅನುಷಾ ಸುರೇಶ ತಂಡದ ನೃತ್ಯ ರೂಪಕಗಳು ಗಮನ ಸೆಳೆದವು. ಅದಕ್ಕೂ ಪೂರ್ವದಲ್ಲಿ ಯಲ್ಲಾಪುರದ ನಾರಾಯಣ ಭಟ್ ತಂಡದ ಜಾದೂ ಪ್ರದರ್ಶನವೂ ಪ್ರೇಕ್ಷಕರನ್ನು ಖುಷಿಪಡಿಸುವಲ್ಲಿ ಯಶಸ್ವಿಯಾಯಿತು. ರಾತ್ರಿ ಸ್ಯಾಂಡಲ್​ವುಡ್​ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯಾ ತಂಡ ಮೋಡಿ ಮಾಡಿತು. ಜನ್ಯಾ ನೇತೃತ್ವದ 30 ಕ್ಕೂ ಅಧಿಕ ಕಲಾವಿದರ ತಂಡ ಕನ್ನಡದ 20 ಕ್ಕೂ ಅಧಿಕ ಚಿತ್ರಗೀತೆಗಳನ್ನು ಹಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net