

ಬಾಗಲಕೋಟೆ: ಕೊಲ್ಕತ್ತದಲ್ಲಿ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡನೀಯ. ಹೆಣ್ಣುಮಕ್ಕಳು ಇಂತಹ ಹಿಂಸೆಗೆ ನಿರಂತರವಾಗಿ ಬಲಿಯಾಗುತ್ತಿರುವುದು ಅದು ಸಮಾಜದ ಅನಾರೋಗ್ಯಕರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಭವನೇಶ್ವರಿ ಯಳಮಲಿ ಹೇಳಿದರು.
ಈಚೆಗೆ ಕೊಲ್ಕತ್ತದಲ್ಲಿ ನಡೆದ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಎಸ್.ಎನ್.ಎಂ.ಸಿ ನವನಗರ ಶಾಖೆ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.
ಸಮಾಜದ ಸುಶಿಕ್ಷಿತರ ಮೇಲೆ ಈ ರೀತಿಯ ದೌರ್ಜನ್ಯ ನಡೆಯುತ್ತಿರುವಾಗ ಇನ್ನು ಗ್ರಾಮೀಣ ಪ್ರದೇಶಗಳಲ್ಲಿನ ಅನಕ್ಷರಸ್ಥ ಹೆಣ್ಣುಮಕ್ಕಳ ಸ್ಥಿತಿಯನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ. ಸಮಾಜದಲ್ಲಿನ ನಾಗರಿಕರು ಈ ರೀತಿಯ ದೌರ್ಜನ್ಯವನ್ನು ಖಂಡಿಸಬೇಕು. ಭಯದ ವಾತಾವರಣದಲ್ಲಿ ಮಹಿಳಾ ವೈದ್ಯರು ಕಾರ್ಯನಿರ್ವಹಿಸಬೇಕಾಗಿದೆ. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಮಹಿಳಾ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಕುಮಾರೇಶ್ವರ ಆಸ್ಪತ್ರೆಯ ಒ.ಪಿ.ಡಿ ವಿಭಾಗದಿಂದ ಸಂಜೆ ೬.೩೦ ಗಂಟೆಗೆ ಆರಂಭಗೊಂಡ ಮೆರವಣಿಗೆ ಎ.ಪಿ.ಎಂ.ಸಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಹಾಯ್ದು ಕುಮಾರೇಶ್ವರ ಆಸ್ಪತ್ರೆ ಎದುರು ಕೊನೆಗೊಂಡಿತು.
ಪ್ರತಿಭಟನೆಯಲ್ಲಿ ಅಂದಾಜು ೫೦೦ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯ್.ಎಂ.ಎ ಎಸ್.ಎನ್.ಎಂ.ಸಿ ನವನಗರ ಶಾಖೆಯ ಅಧ್ಯಕ್ಷ ಡಾ.ಅನುಷ್ಕಾ ದೇವಣಿಕರ, ಐ.ಎಂ.ಎ ಬಾಗಲಕೋಟೆ ಶಾಖೆಯ ಅಧ್ಯಕ್ಷ ಡಾ.ಅರುಣ ಮಿಸ್ಕಿನ, ಕಾರ್ಯದರ್ಶಿ ಡಾ.ಪ್ರಮೋದ ಮಿರ್ಜಿ ಇತರರು ಇದ್ದರು.