

ಕಲಬುರಗಿ: ಬರ ಪರಿಹಾರ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಮಳೆ ಕೊರತೆಯಿಂದ ೨೩೬ ತಾಲೂಕುಗಳ ಪೈಕಿ ೧೬೧ರಲ್ಲಿ ತೀವ್ರ ಬರ, ೩೪ ಸಾಧಾರಣ ಸೇರಿ ೧೯೫ ತಾಲೂಕುಗಳಲ್ಲಿ ಬೆಳೆ ಹಾನಿಗೀಡಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ರೈತರ ನೆರವಿಗೆ ಮೊದಲ ಆದ್ಯತೆ ನೀಡುವ ಬದಲಿಗೆ ಸರ್ಕಾರ ಕಾಟಾಚಾರಕ್ಕಾಗಿ ಪರಿಹಾರ ಘೋಷಿಸಲು ಹೊರಟಿದೆ. ವೈಜ್ಞಾನಿಕ ಪರಿಹಾರ ಜತೆಗೆ ಜಾನುವಾರುಗಳ ಸಂರಕ್ಷಣೆಗೆ ಪರಿಹಾರ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ-ಸಕ್ರಮ ಮತ್ತು ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಸಾಂಪ್ರದಾಯಿಕ ಅರಣ್ಯವಾಸಿ ಸಾಗುವಳಿದಾರರಿಗೆ ತಾಂತ್ರಿಕ ತೊಂದರೆ ನೆಪ ಮಾಡಿ ಹಕ್ಕುಪತ್ರ ನೀಡುತ್ತಿಲ್ಲ. ಅಕ್ರಮ-ಸಕ್ರಮ ಸಮಿತಿ ರಚಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ವಾರ್ಷಿಕ ಉದ್ಯೋಗ ದಿನಗಳ ಮಿತಿ ೧೦೦ರಿಂದ ೧೫೦ಕ್ಕೆ ಹೆಚ್ಚಿಸುವುದರ ಜತೆಗೆ ಯೋಜನೆ ವ್ಯಾಪ್ತಿ, ಮೊತ್ತ ಹೆಚ್ಚಳದ ಆದೇಶ ಜಾರಿಗೊಳಿಸಬೇಕು. ಬರಪೀಡಿತ ತಾಲೂಕುಗಳಲ್ಲಿ ೧೫೦ ದಿನ ಖಾತ್ರಿ ಯೋಜನೆ ಪ್ರಾರಂಭಿಸಬೇಕು. ನರೇಗಾ ಯೋಜನೆಗೆ ಅರ್ಜಿ ಸಲ್ಲಿಕೆ ಅಂತಿಮ ದಿನಾಂಕವನ್ನು ನ.೩೦ರವರೆಗೆ ವಿಸ್ತರಿಸಬೇಕು ಎಂದು ಕೋರಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ, ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಮಲ್ಲಿಕಾರ್ಜುನ ಕೆಲ್ಲೂರ, ಭೀಮರಾಯ ಮುದಬಸಪ್ಪಗೋಳ, ಸಾಜೀದ್ ಅಹ್ಮದ್ ದಿಗ್ಗಾಂವ್, ಚಿದಂಬರರಾವ ಮಚ್ಚೆಟ್ಟಿ, ಭೀಮಶಾ ಬೇಡರ್, ರಾಜೇಂದ್ರ ಇತರರಿದ್ದರು.