

ಹನೂರು: ಬೂದುಬಾಳು ಗ್ರಾಮದ ಪ್ರಸಿದ್ಧ ಶ್ರೀಗುಡಿಹಟ್ಟಿ ವೆಂಕಟರಮಣಸ್ವಾಮಿ ದೇಗುಲದಲ್ಲಿ ಕಡೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಕಡೇ ಶ್ರಾವಣ ಶನಿವಾರದ ಅಂಗವಾಗಿ ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಬೂದುಬಾಳು ಗ್ರಾಮದ ಶ್ರೀವೆಂಕಟರಮಣಸ್ವಾಮಿ ದೇಗುಲವನ್ನು ತಳಿರು ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ಸ್ವಾಮಿಗೆ ವಿವಿಧ ಅಭಿಷೇಕ, ಸಹಸ್ರನಾಮ ಹಾಗೂ ವಿಶೇಷ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಆಗಮಿಸಿದ ಭಕ್ತರು ಧೂಪ ಹಾಕಿ ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ದೇಗುಲದ ಮುಂಭಾಗ ಗಂಧದಕಡ್ಡಿ, ಕರ್ಪೂರ ಹಚ್ಚಿ ಕೈ ಮುಗಿದು ಸ್ವಾಮಿಯನ್ನು ನೆನೆದರು, ಕೆಲ ಭಕ್ತರು ಮುಡಿ ಸೇವೆಯನ್ನು ನೀಡಿ ಹರಕೆ ತೀರಿಸಿದರು.
ಚಾಮರಾಜನಗರ, ಮಂಡ್ಯ ಸೇರಿದಂತೆ ಈ ಭಾಗದ ಮಾರ್ಟಳ್ಳಿ, ಎಲ್ಲೇಮಾಳ, ಕುರಟ್ಟಿಹೊಸೂರು, ದಿನ್ನಳ್ಳಿ, ದಂಟಳ್ಳಿ, ಹನೂರು, ಕೊಳ್ಳೇಗಾಲ, ಕಾಮಗೆರೆ, ಮಂಗಲ, ಕಣ್ಣೂರು, ಅಚಗಳ್ಳಿದೊಡ್ಡಿ, ಅಜ್ಜೀಪುರ, ರಾಮಾಪುರ, ಬಂಡಳ್ಳಿ, ಸಿಂಗಾನಲ್ಲೂರು ಹಾಗೂ ಇನ್ನಿತರ ಕಡೆಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಭಕ್ತರು ಆಗಮಿಸಿದ್ದರು. ದೇಗುಲದ ವತಿಯಿಂದ ಹಾಗೂ ದಾನಿಗಳಿಂದಲೂ ಅನ್ನ ಸಂತರ್ಪಣೆ ನಡೆಯಿತು.
ಆಟೋದಲ್ಲಿ ತೆರಳಿದ ಭಕ್ತರು: ಬೂದುಬಾಳು ಗ್ರಾಮಕ್ಕೆ ಎಂದಿನಂತೆ ಒಂದು ಸಾರಿಗೆ ಬಸ್ ಸಂಚರಿಸುತ್ತಿತ್ತು. ಆದರೆ ಕಡೇ ಶ್ರಾವಣ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ಹೆಚ್ಚುವರಿ ಬಸ್ ಸೌಕರ್ಯ ಇಲ್ಲದ ಪರಿಣಾಮ ಬಹುತೇಕ ಭಕ್ತರು ಮಂಗಲ ಗ್ರಾಮದಿಂದ ಬೂದುಬಾಳು ಗ್ರಾಮಕ್ಕೆ ಆಟೋಗಳ ಮೂಲಕವೇ ತೆರಳುವಂತಾಯಿತು. ಕೆಲ ಭಕ್ತರು ನಡದೇ ಸಾಗಿದರು. ಇದರಿಂದ ಭಕ್ತರು ತೊಂದರೆ ಅನುಭವಿಸಿದರು.