ವೃತ್ತ, ರಸ್ತೆಗಳ ನಾಮಕರಣಕ್ಕೆ ಪೈಪೋಟಿ!

mng---11 sep Ambedkar circle
Published on

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ವೃತ್ತ, ಮುಖ್ಯ ರಸ್ತೆ, ಉದ್ಯಾನವನಗಳಿಗೆ ಹೊಸ ನಾಮಕರಣ ಮಾಡಲು ಮಹಾನಗರ ಪಾಲಿಕೆಯಲ್ಲಿ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ ರಾಜಕೀಯ ಪಕ್ಷಗಳ ಮುಖಂಡರು, ಹಾಲಿ, ಮಾಜಿ ಶಾಸಕರ, ಸಂಸದರ ಹೆಸರು ನಾಮಕರಣಕ್ಕೆ ಮುಂದಾಗಿರುವುದು ಚರ್ಚೆಗೆ ಕಾರಣವಾಗುತ್ತಿದೆ.

ನಗರದಲ್ಲಿ ದಂಡು ಮಂಡಳಿ ಪ್ರದೇಶ ಹೊರತುಪಡಿಸಿ ಪಾಲಿಕೆ 58 ವಾರ್ಡ್‌ಗಳಲ್ಲಿನ ಹತ್ತು ಮುಖ್ಯ ರಸ್ತೆ, ಆರು ವೃತ್ತ, ಏಳು ಉದ್ಯಾನವನಗಳಿಗೆ ಹೊಸದಾಗಿ ಗಣ್ಯರ ಹೆಸರು ನಾಮಕರಣ ಮಾಡಲು ಸದಸ್ಯರ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಕೆಲ ಸದಸ್ಯರು ತಮ್ಮನ್ನು ರಾಜಕೀಯವಾಗಿ ಬೆಳೆಸಿರುವ ನಾಯಕರ ಹೆಸರಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಜತೆಗೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಹಾಗಾಗಿ ಸದಸ್ಯರು ಮೊದಲ ಹಂತದಲ್ಲಿ ಪಕ್ಷಾತೀತವಾಗಿ ಕೆಲ ಗಣ್ಯರ ಹಸರು ನಾಮಕರಣ ಮಾಡುವುದು. ಬಳಿಕ ತಮ್ಮ ವಾರ್ಡ್‌ಗಳಲ್ಲಿರುವ ಪ್ರಮುಖರ ಹೆಸರು ನಾಮಕರಣಕ್ಕೆ ಮುಂದಾಗಿದ್ದಾರೆ.

ತಮ್ಮ ನಾಯಕ ಹೆಸರಿಡಲು ಪ್ರಯತ್ನ: ಈಗಾಗಲೇ ಬೆಳಗಾವಿ ಚನ್ನಮ್ಮ ವೃತ್ತದಿಂದ ತೆರಿಗೆ ಇಲಾಖೆ ಕಚೇರಿವರೆಗಿನ ಕ್ಲಬ್ ಮಾರ್ಗಕ್ಕೆ ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ಹೆಸರು ನಾಮಕರಣಕ್ಕೆ ಶಾಸಕ ಅಭಯ ಪಾಟೀಲ ಪ್ರಸ್ತಾವನೆ ಮಂಡಿಸಿದ್ದಾರೆ. ಇದಕ್ಕೆ ಪಾಲಿಕೆ ಪರಿಷತ್ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

ಇದರ ಬೆನ್ನಲ್ಲೆ ವಿವಿಧ ವಾರ್ಡ್‌ಗಳಲ್ಲಿನ ಮುಖ್ಯ ರಸ್ತೆಗೆ ತಮ್ಮ ರಾಜಕೀಯ ನಾಯಕರು, ಹಾಲಿ, ಮಾಜಿ ಶಾಸಕರು, ಮಾಜಿ ಸಚಿವರ ಹೆಸರು ನಾಮಕರಣಕ್ಕೆ ಪರೋಕ್ಷವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಗಣ್ಯ ವ್ಯಕ್ತಿಗಳ ಹೆಸರು ಹೊರತು ಪಡಿಸಿ ಬೇರೆಯವರ ಹೆಸರಿಡಲು ಕೆಲವರಿಂದ ವಿರೋಧ ವ್ಯಕ್ತವಾಗಿದೆ.

ಶಾಹುನಗರ, ಹಿಂಡಲಗಾ, ವೀರಭದ್ರನಗರ, ಆರ್‌ಪಿಡಿ, ಗಾಂಧಿನಗರ, ಹಳೇ ಪಿಬಿ ರಸ್ತೆ, ರಾಣಿ ಚನ್ನಮ್ಮ ನಗರ, ಸದಾಶಿವ ನಗರ, ಹನುಮಾನ ನಗರ, ವಿಶ್ವೇಶ್ವರಯ್ಯ ನಗರ, ಎಪಿಎಂಸಿ, ಕುವೆಂಪು ನಗರ, ಖಡೇಬಜಾರ ಮಾರುಕಟ್ಟೆ ಸೇರಿ ವಿವಿಧ ಪ್ರದೇಶಗಳಲ್ಲಿನ ವೃತ್ತ, ಪ್ರಮುಖ ರಸ್ತೆಗಳಿಗೆ ಹೆಸರು ನಾಮಕರಣ ಮಾಡಲು ಗುರುತಿಸಲಾಗಿದೆ. ಆದರೆ, ಹೆಸರು ನಾಮಕರಣದ ಯಾವುದೇ ಪ್ರಸ್ತಾವನೆಗಳು ಪಾಲಿಕೆಯ ಸಾಮಾನ್ಯ ಸಭೆಗೆ ಬಂದಿಲ್ಲ ಎಂದು ನಾಮಕರಣ ಗೊಂದಲದಿಂದ ದೂರ ಉಳಿದಿರುವ ಸದಸ್ಯರು ತಿಳಿಸಿದ್ದಾರೆ.

ನಗರದ ಪ್ರಮುಖ ವೃತ್ತ, ರಸ್ತೆಗಳಿಗೆ ಗಣ್ಯ ವ್ಯಕ್ತಿಗಳ ಹೆಸರಿಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡರು ಸರ್ಕಾರದ ಒಪ್ಪಿಗೆ ಕಡ್ಡಾಯ. ಈಗಾಗಲೇ ಒಂದು ರಸ್ತೆ, ವೃತ್ತಕ್ಕೆ ಹೆಸರು ನಾಮಕರಣಗೊಂಡಿದ್ದರೆ ಅದನ್ನು ಬದಲಾಯಿಸುವುದು ಕಷ್ಟ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. | ಶುಭ.ಬಿ ಪಾಲಿಕೆ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net