

ಎಚ್.ಎಂ. ಮಾರುತಿ ಹೊನ್ನಾವರ
ಹೊನ್ನಾವರ ತಾಲೂಕಿನ ವೀಳ್ಯದೆಲೆಗೆ ದೇಶಾದ್ಯಂತ ಬೇಡಿಕೆಯಿದೆ. ದೆಹಲಿ ಸೇರಿ ದೊಡ್ಡ ನಗರಗಳಿಗೆ ರಫ್ತಾಗುತ್ತದೆ. ಆದರೆ, ಕರೊನಾ ಲಾಕ್ಡೌನ್ನಿಂದಾಗಿ ಕಳೆದ ಎರಡು ತಿಂಗಳಿಂದ ಬೇಡಿಕೆಯಿಲ್ಲದೆ ಎಲೆಗಳು ಗಿಡದಲ್ಲಿ ಬಾಡುತ್ತಿವೆ. ಇದರಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.
ರೈತರು ಬೆಳೆದ ಬೆಳೆಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ, ಕರೊನಾ ಪರಿಣಾಮವಾಗಿ ಸಾರಿಗೆ ವ್ಯವಸ್ಥೆಯಲ್ಲಿ ಉಂಟಾಗಿರುವ ವ್ಯತ್ಯಯವು ವೀಳ್ಯದೆಲೆ ಸಾಗಾಟಕ್ಕೆ ಹಿನ್ನಡೆ ಉಂಟು ಮಾಡಿದೆ.
ಜಿಲ್ಲೆಯ ವೀಳ್ಯದೆಲೆ ಬೆಳೆಗಾರರು ಮತ್ತು ವ್ಯಾಪಾರಸ್ಥರು ಹಾವೇರಿ, ರಾಣೆಬೆನ್ನೂರ, ಶಿವಮೊಗ್ಗ, ಸಾಗರ ಮುಂತಾದ ನಗರಗಳಿಗೆ ಬಸ್ ಮೂಲಕ ಸಾಗಾಟ ಮಾಡುತ್ತಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಕೂಡ ಮಾರಾಟದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಡಿಯಲ್ಲಿರುವ ಚೆಕ್ಪೋಸ್ಟ್ಗಳಲ್ಲಿ ವೀಳ್ಯದೆಲೆ ಕಟ್ಟುಗಳನ್ನು ತುಂಬಿಕೊಂಡು ಹೋಗುವ ವಾಹನಗಳನ್ನು ತಡೆಯಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಅಲ್ಲದೆ, ಸಾರಿಗೆ ವ್ಯವಸ್ಥೆ ಇನ್ನೂ ಚೇತರಿಕೆಯಾಗದೇ ಇರುವುದರಿಂದ ವ್ಯಾಪಾರಸ್ಥರು ಬೆಳೆಗಾರರ ಕಡೆಗೆ ಮುಖ ಹಾಕುತ್ತಿಲ್ಲ.
ವೀಳ್ಯದೆಲೆ ಮಾರಾಟವಿಲ್ಲದೆ ಜಿಲ್ಲೆಯ ಸಾವಿರಾರು ಬೆಳೆಗಾರರು, ಕೆಲಸಗಾರರು ಕೆಲಸವಿಲ್ಲದೆ ಕುಳಿತಿದ್ದಾರೆ. ಹಳ್ಳಿಗಳಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಅಡಕೆಯನ್ನು ಮುಖ್ಯ ಬೆಳೆಯಾಗಿ ಬೆಳೆಯುವ ರೈತರು ಉಪ ಬೆಳೆಯಾಗಿ ವೀಳ್ಯದೆಲೆ ಹಾಗೂ ಕಾಳುಮೆಣಸು0
ಬೆಳೆಯುವುದು ಜಿಲ್ಲೆಯಲ್ಲಿ ವಾಡಿಕೆಯಾಗಿದೆ. ಮಳೆಗಾಲದಲ್ಲಿ ಬೆಲೆ ಕಡಿಮೆ ಇರುತ್ತದೆಯಾದರೂ ಬೇಸಿಗೆಯಲ್ಲಿ ಇಲ್ಲಿನ ವೀಳ್ಯದೆಲೆಗಳಿಗೆ ಬಂಪರ್ ಬೆಲೆ ಬರುತ್ತದೆ. ಆದರೆ, ಈ ವರ್ಷ ಬೇಸಿಗೆಯಲ್ಲಿಯೇ ಕರೊನಾ ವಕ್ಕರಿಸಿರುವುದು ವೀಳ್ಯದೆಲೆ ಬೆಳೆದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
5 ಲಕ್ಷಕ್ಕೂ ಅಧಿಕ ಕಟ್ಟು ವಹಿವಾಟು: ಹೊನ್ನಾವರ ತಾಲೂಕಿನಲ್ಲಿ ಅಂದಾಜು 200 ಹೆಕ್ಟೇರ್ ಭೂಮಿಯಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ. ತಾಲೂಕಿನ ಹೊಸಾಕುಳಿ, ಸಾಲಕೋಡ, ಮುಗ್ವಾ, ಖರ್ವಾ, ಕಡತೋಕ, ಕಡ್ಲೆ, ನಗರಬಸ್ತಿಕೇರಿ, ಹೆರಂಗಡಿ, ಚಂದಾವರ ಸೇರಿ ಇನ್ನೂ ಹಲವು ಭಾಗಗಳಲ್ಲಿ ರೈತರು ವೀಳ್ಯದೆಲೆ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ವಾರ್ಷಿಕವಾಗಿ ತಾಲೂಕಿನಿಂದ ಅಂದಾಜು 5,55,300 ಕಟ್ಟು (1 ಕಟ್ಟು =100 ಎಲೆ) ರಫ್ತಾಗುತ್ತದೆ. ಹೈದರಾಬಾದ್, ಭೋಪಾಲ್, ಗೋವಾ, ಲಖನೌಗಳಿಗೂ ಇಲ್ಲಿನ ವೀಳ್ಯದೆಲೆ ರಫ್ತಾಗುತ್ತದೆ. ರಾಜ್ಯದ ರಾಣೆಬೆನ್ನೂರು, ಸವಣೂರು, ಸಾಗರ, ಶಿವಮೊಗ್ಗ ಮಾರುಕಟ್ಟೆಗೆ ವರ್ಷದ ಎಲ್ಲ ದಿನವೂ ವೀಳ್ಯದೆಲೆ ಸಾಗಿಸಲಾಗುತ್ತದೆ. ಬೆಳೆಗಾರರು, ಕೊಯ್ಲು ಮಾಡುವವರು, ಸಾಗಾಣಿಕೆ ಮಾಡುವವರು, ವ್ಯಾಪಾರಿಗಳು ಸೇರಿ 1200ಕ್ಕೂ ಅಧಿಕ ನೇರ ಅವಲಂಬಿತರು ತಾಲೂಕಿನಲ್ಲಿದ್ದಾರೆ.
ಕೃಷಿಕರು ಬೆಳೆದ ಬೆಳೆಯ ಸಾಗಾಟ ಮತ್ತು ಮಾರಾಟಕ್ಕೆ ಯಾರೂ ಅಡ್ಡಿಪಡಿಸಬಾರದು. ನಮ್ಮ ಜಿಲ್ಲೆಯ ಹೊರಗೂ ಯಾರಾದರೂ ರೈತರಿಗೆ ಅಡ್ಡಿಪಡಿಸಿದರೆ ಅಂಥವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬಹುದು.| ವಿವೇಕ ಶೇಣ್ವಿ, ಹೊನ್ನಾವರ ತಹಸೀಲ್ದಾರ್
ವೀಳ್ಯದೆಲೆಯನ್ನು ಉಪಬೆಳೆಯಾಗಿ ಕಾಳಜಿಯಿಂದ ಬೆಳೆಯುತ್ತೇವೆ. ಕಳೆದ ಮೂರು ತಿಂಗಳಿಂದ ಈ ಬೆಳೆಗೆ ಬೆಲೆಯಿಲ್ಲದಂತಾಗಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು| ಶಂಕರ ಶೆಟ್ಟಿ ವಡಗೇರಿ, ವೀಳ್ಯದೆಲೆ ಬೆಳೆಗಾರರು.
ಕರೊನಾದಿಂದ ವೀಳ್ಯದೆಲೆ ವ್ಯಾಪಾರಕ್ಕೆ ಸಂಪೂರ್ಣ ಹೊಡೆತ ಬಿದ್ದಿದೆ. ನಾಲ್ಕು ತಿಂಗಳ ಹಿಂದೆ ಅಂದಾಜು 10 ಸಾವಿರ ಎಲೆಗಳಿರುವ ಒಂದು ಪೊಟ್ಟಣಕ್ಕೆ 4000 ರೂ. ಬೆಲೆ ಇತ್ತು. ಈಗ ಇದರ ಬೆಲೆ 700 ರೂ.ಗೆ ಕುಸಿದಿದೆ. ನಾವು ಆತಂಕಕ್ಕೊಳಗಾಗಿದ್ದೇವೆ.| ಸುಬ್ರಾಯ ದೇಶಭಂಡಾರಿ ವೀಳ್ಯದೆಲೆ ವ್ಯಾಪಾರಿ