

ಬಾಗಲಕೋಟೆ: ಭಕ್ತರ ದೇಣಿಗೆಯಿಂದ ನಿರ್ಮಾಣವಾಗಿರುವ ಬಾಗಲಕೋಟೆ ತಾಲೂಕಿನ ಸುಕ್ಷೇತ್ರ ಮುಚಖಂಡಿ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನದ ನೂತನ ಬೆಳ್ಳಿ ರಥ ಲೋಕಾರ್ಪಣೆ ಬೆಳ್ಳಿ ರಥದ ಭವ್ಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ವಿದ್ಯಾಗಿರಿಯ ೨೧ನೇ ಕ್ರಾಸ್‌ನಲ್ಲಿರುವ ಗಂಗೂರವರ ನಿವಾಸದ ಎದುರು ಮಂಗಳವಾರ ಬೆಳ್ಳಿ ರಥ ಲೋಕಾರ್ಪಣೆಗೊಳಿಸಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಈ ಭಾಗದ ಆರಾಧ್ಯ ದೈವನಾಗಿದ್ದು, ಈ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದುಕೊಂಡು ಹೋಗುತ್ತಾರೆ. ಭಕ್ತರು ನೀಡಿದ ದೇಣಿಗೆಯಿಂದ ಬೆಳ್ಳಿ ರಥ ನಿರ್ಮಾಣವಾಗಿದ್ದು, ಇಂದು ಲೋಕಾರ್ಪಣೆಗೊಳಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರು ಕೈ ಜೋಡಿಸಬೇಕು ಎಂದರು.
ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಮೀಟಿಯ ಅಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ೫೨ ಕೆ.ಜಿ.ಯಲ್ಲಿ ವೀರಭದ್ರೇಶ್ವರ ಬೆಳ್ಳಿ ರಥ ನಿರ್ಮಾಣವಾಗಿದೆ. ಬಾಗಲಕೋಟೆ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ ಹೊರದೇಶದಲ್ಲಿರುವ ವೀರಭದ್ರೇಶ್ವರ ದೇವರ ಭಕ್ತರು ಬೆಳ್ಳಿ ರಥ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಅರ್ಧ ಕೆ.ಜಿ., ೧ ಕೆ.ಜಿ, ೫ ಕೆ.ಜಿ. ೧೦ ಕೆ.ಜಿ ಹೀಗೆ ಸಾಕಷ್ಟು ಭಕ್ತರು ತಮ್ಮ ಕೈಲಾದಷ್ಟು ಸ್ವಯಂ ಪ್ರೇರಣೆಯಿಂದ ಬೆಳ್ಳಿ ರಥ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.
ಮುಚಖಂಡಿ ಗ್ರಾಮದ ಸಕಲ ದೈವ ಮಂಡಳಿಯವರ ಹಾಗೂ ಕಮೀಟಿಯವರ ಸಹಕಾರದಿಂದ ಮುಚಖಂಡಿ ಗ್ರಾಮದ ಧಾರ್ಮಿಕ ಕ್ಷೇತ್ರವಾಗಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಶಾಸಕ ವೀರಣ್ಣ ಚರಂತಿಮಠ ಕೂಡ ದೇವಸ್ಥಾನದ ಜೀಣೋದ್ಧಾರಕ್ಕೆ ಸದಾ ಸಹಕಾರ ನೀಡುತ್ತಿದ್ದಾರೆ ಎಂದರು.
ಪುರುವಂತರು, ಮುಚಖಂಡಿ ಗ್ರಾಮದ ಮಹಿಳೆಯರ ಆರುತಿ, ಭಜನಾ ಮಂಡಳಿ, ಸಕಲ ವಾದ್ಯ ವೈಭವದೊಂದಿಗೆ ಆರಂಭಗೊಂಡ ಬೆಳ್ಳಿ ರಥದ ಭವ್ಯ ಮೆರವಣಿಗೆ ವಿದ್ಯಾಗಿರಿಯ ೨೧ನೇ ಕ್ರಾಸ್‌ದಿಂದ ಆರಂಭಗೊಂಡು ಬಸವೇಶ್ವರ ಇಂಜನಿಯರಿಂಗ್ ಕ್ರಾಸ್, ಕಾಳಿದಾಸ್ ವೃತ್ತ, ಬಸವೇಶ್ವರ ಬ್ಯಾಂಕ್ ರಸ್ತೆ ಮೂಲಕ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ತಲುಪಿತು.
ಧಾರ್ಮಿಕ ಕೈಂಕರ್ಯ: ಗಂಗೂರವರು ನಿರ್ಮಿಸಿದ ಬೆಳ್ಳಿ ರಥಕ್ಕೆ ಬೆಳಗ್ಗೆ ಬಿಲ್ ಕೆರೂರ ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಮುತ್ತತ್ತಿ ಹಿರೇಮಠದ ಗುರುಲಿಂಗ ಶಿವಯೋಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳ್ಳಿ ರಥ ಸಾಗುವ ಮಾರ್ಗದಲ್ಲಿ ಭಕ್ತರು ರಸ್ತೆಯ ಅಕ್ಕಪಕ್ಕ ನಿಂತು ರಥಕ್ಕೆ ಕೈ ಮುಗಿದು ನಮಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು.
ಇನ್ನು ಬೆಳ್ಳಿ ರಥ ಮುಚಖಂಡಿ ಗ್ರಾಮವನ್ನು ಪ್ರವೇಶ ಮಾಡುತ್ತಿದ್ದಂತೆ ಗ್ರಾಮಸ್ಥರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ರಸ್ತೆಯ ಈಕ್ಕೇಲುಗಳಲ್ಲಿ ನಿಂತಿದ್ದ ಭಕ್ತ ಸಮೂಹ ರಥಕ್ಕೆ ಚುರುಮುರಿ, ಹೂವುಗಳನ್ನು ಅರ್ಪಿ ಭಕ್ತಿ ಸಮರ್ಪಿಸಿದರು. ಮಹಿಳೆಯರು ಸಹ ಸರದಿಯಲ್ಲಿ ನಿಂತಿ ಪೂಜೆ ಸಲ್ಲಿಸಿದರು. ಬೆಳ್ಳಿ ರಥದ ಮೆರವಣಿಗೆಯಲ್ಲಿ ದೇವಸ್ಥಾನದ ಕಮೀಟಿ ಸದಸ್ಯರು, ದೇವಸ್ಥಾನ ಅರ್ಚಕರು, ಮುಚಖಂಡಿ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.