

ಕಲಬುರಗಿ: ನಗರದ ಎಚ್.ಕೆ.ಸೀತನೂರ್ ಆರ್ಟ್ ಗ್ಯಾಲರಿಯಲ್ಲಿ ಮೂರ್ತ ಮತ್ತು ಅಮೂರ್ತ ಕಲೆಗಳ ಸಂಗಮದಿಂದ ವಿಸ್ಮಯದ ಆನಂದಾನುಭೂತಿ ಲಭಿಸುತ್ತದೆ ಎಂದು ಹಿರಿಯ ಕಲಾವಿದರೂ ಆದ ಮೈಸೂರು ಕಾವಾ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಎ. ಉಪಾಧ್ಯ ಹೇಳಿದರು.
ಕಲಬುರಗಿ ಶರಣನಗರದಲ್ಲಿರುವ ಎಚ್.ಕೆ ಸೀತನೂರ್ ಆರ್ಟ್ ಗ್ಯಾಲರಿಗೆ ಸೋಮವಾರ ಭೇಟಿ ನೀಡಿ ಕಲಾವಿದರನ್ನುದ್ದೇಶಿಸಿ ಮಾತನಾಡಿ, ಗ್ಯಾಲರಿಯ ಕಲಾಕೃತಿಗಳ ಮೂಲಕ ಸೀತನೂರ್ ಕಲಾಕುಂಚ ಮತ್ತು ಬಣ್ಣಗಳ ಮೂಲಕ ಅದ್ಭುತ ಸೃಷ್ಟಿಸಿದ್ದಾರೆ. ವಿನ್ಯಾಸ ಬಯಲು ಮಾಡಿದ ಮತ್ತು ಬಯಲಿನಲ್ಲಿ ವಿನ್ಯಾಸ ರಚಿಸಿ ಅಂತರಂಗದ ಅನುಭೂತಿ ಹೆಚ್ಚಿಸಿದ್ದಾರೆ. ಮೂರ್ತ ಮತ್ತು ಅಮೂರ್ತ ಕಲೆಗಳ ಮೂಲಕ ಗ್ಯಾಲರಿಯ ಕಲಾಕೃತಿಗಳ ಸಂಗಮ ಕಲಾರಸಿಕರನ್ನು ಆಕರ್ಷಿಸುತ್ತದೆ. ಸೀತನೂರ್ ಲೋಕೋತ್ತರ ಕೀರ್ತಿ ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಮೈಸೂರು ಕಾವಾ ಸಂಸ್ಥೆಯಲ್ಲಿ ೩೨ವರ್ಷ ಪ್ರಾಧ್ಯಾಪಕರಾಗಿ ಕಲಾ ವಿಮರ್ಶಕ, ಕಲಾಚರಿತ್ರೆಕಾರ ಹಾಗೂ ನಾಡಿನ ಖ್ಯಾತ ಕಲಾವಿದ ರಾಗಿ ಬೆಳೆದು ಗದಗದಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ಕಲಾಕಾಶಿ ನಿರ್ಮಿಸಿದ್ದಾರೆ. ಕಲಾ ಕ್ಷೇತ್ರಕ್ಕೆ ಉಪಾಧ್ಯರು ಅನುಪಮ ಕೊಡುಗೆ ನೀಡುತ್ತಿದ್ದು, ಗ್ಯಾಲರಿ ವತಿಯಿಂದ ಸನ್ಮಾನ ಮಾಡುವುದು ಹೆಮ್ಮೆ ಎಂದು ನಿರ್ದೇಶಕ ಮೋಹನ್ ಸೀತನೂರ್ ಹೇಳಿದರು.
ಸೀತನೂರ್, ಹಿರಿಯ ಕಲಾವಿದರಾದ ಮಾನಯ್ಯ ಬಡಿಗೇರ, ಆಕಾಶವಾಣಿ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಅವರು ಉಪಾಧ್ಯ ಅವರನ್ನು ಸನ್ಮಾನಿಸಿದರು. ಎಂ.ಹೆಚ್.ಬೆಳಮಗಿ, ಶಾಹಿದ್ ಪಾಶಾ, ಡಾ.ಅಶೋಕ ಶೆಟಕಾರ್, ಲಕ್ಷ್ಮೀಕಾಂತ ಮನೋಹರ್, ಎಂ.ಸಂಜೀವ, ವಾದಿರಾಜ, ವೈಜಯಂತಿ, ಸಮತಾ, ರಾಹುಲ್, ಮಾಧುರಿ, ರಾಕೇಶ ಇತರರಿದ್ದರು.