

ಬೇಲೂರು: ಪಟ್ಟಣದ ವಿಷ್ಣುಸಮುದ್ರ ಕಲ್ಯಾಣಿಯಲ್ಲಿ ಶ್ರೀ ಚನ್ನಕೇಶವಸ್ವಾಮಿ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು.
ಶ್ರೀ ಚನ್ನಕೇಶವ ಸ್ವಾಮಿ ತೆಪ್ಪೋತ್ಸವದ ಅಂಗವಾಗಿ ಪಟ್ಟಣ ಸಮೀಪದ ವಿಷ್ಣುಸಮುದ್ರ ಕಲ್ಯಾಣಿ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವರ ಉತ್ಸವ ಮೂರ್ತಿಯನ್ನು ದೇಗುಲದಿಂದ ಅಡ್ಡೆಗಾರರು ಅರ್ಚಕರ ಸಮ್ಮುಖದಲ್ಲಿ ಮೆರವಣಿಗೆಯಲ್ಲಿ ಕಲ್ಯಾಣಿವರೆಗೆ ಕರೆತಂದು ಪುಷ್ಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ತೆಪ್ಪದಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ಶ್ರೀ ಚನ್ನಕೇಶವಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿದರು.
ಪಂಚಾಮೃತ ಅಭಿಷೇಕ, ತೀರ್ಥಸ್ನಾನ, ಶೇಷತೀರ್ಥ ಪ್ರೋಕ್ಷಣೆ ನಡೆಸಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಕಲ್ಯಾಣಿಯ ಗೋಪುರ ಸುತ್ತ ದೇವರಿದ್ದ ತೆಪ್ಪವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ಉತ್ಸವ ಮೂರ್ತಿಯನ್ನು ಕಲ್ಯಾಣಿ ಮಧ್ಯದಲ್ಲಿರುವ ಕಲ್ಲಿನ ಮಂಟಪದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವವನ್ನು ನೆರವೇರಿಸಲಾಯಿತು.
ಶಾಸಕ ಎಚ್.ಕೆ.ಸುರೇಶ್, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ತಹಸೀಲ್ದಾರ್ ಎಂ.ಮಮತಾ, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಪಿಎಸ್‌ಐ ಶಿವಾನಂದ್ ಪಾಟೀಲ್, ದೇಗುಲದ ಇಒ ಯೋಗೀಶ್, ಸೇವಾರ್ಥದಾರ ರಮೇಶ್ ಭಾಗವಹಿಸಿದ್ದರು.