

ಚಿತ್ತಾಪುರ: ಖ್ಯಾತ ನೇತ್ರ ತಜ್ಞ, ಮಾಜಿ ರಾಷ್ಟçಪತಿ ಗ್ಯಾನಿ ಜೈಲ್‌ಸಿಂಗ್ ಸೇರಿ ಲಕ್ಷಾಂತರ ಜನರ ಬಾಳಿನಲ್ಲಿ ಬೆಳಕು ಮೂಡಿಸಿದ ಡಾ.ಚಂದ್ರಪ್ಪ ರೇಷ್ಮಿ (೯೦) ಕಲಬುರಗಿ ನಿವಾಸದಲ್ಲಿ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಪತ್ನಿ ಕ್ಯಾತಲಿನ್, ಪುತ್ರ ಸಿಜೇಯ್, ಪುತ್ರಿ ಶಾಲಿನಿ ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ. ಚಿತ್ತಾಪುರ ಮೂಲದ ನ್ಯೂಯಾರ್ಕ್ನ ಪೆನ್ಸಿಲ್ವೇನಿಯಾದ ಪಿಟ್ಸ್ಬರ್ಗ್ನಲ್ಲಿ ವಾಸವಾಗಿದ್ದ ಮೃತರು, ಏಳು ವರ್ಷಗಳಿಂದ ಕಲಬುರಗಿ ಜಯನಗರ ಬಡಾವಣೆ ಮನೆಯಲ್ಲಿ ನೆಲೆಸಿದ್ದರು. ವಯೋಸಹಜವಾಗಿ ನಿಧನ ಹೊಂದಿದ್ದು, ಸಂಜೆ ೫ಕ್ಕೆ ಚಿತ್ತಾಪುರ ನಿವಾಸಕ್ಕೆ ಪಾರ್ಥಿವ ಶರೀರ ತರಲಾಗಿದೆ.
ಕೃಷಿ ಮನೆತನದ ಸಿದ್ರಾಮಪ್ಪ-ವೀರಮ್ಮ ರೇಷ್ಮಿ ದಂಪತಿಯ ಎರಡನೇ ಪುತ್ರನಾಗಿದ್ದ ಚಂದ್ರಪ್ಪ ಚಿಕ್ಕ ವಯಸ್ಸಿನಿಂದಲೇ ಕಣ್ಣಿನ ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದರು. ಚಿತ್ತಾಪುರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿ ಕಲಬುರಗಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಅಭ್ಯಸಿಸಿದ ಅವರು, ೧೯೬೨ರಲ್ಲಿ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಪದವಿ ಮುಗಿಸಿದರು. ನ್ಯೂಯಾರ್ಕ್ನಲ್ಲಿ ಎಂಎಸ್ ಶಿಕ್ಷಣ ಪಡೆದ ಬಳಿಕ ಪಿಟ್ಸ್ಬರ್ಗ್ನಲ್ಲಿ ರೇಷ್ಮಿ ಐ ಕೇರ್ ಸೆಂಟರ್ ಆರಂಭಿಸಿ ಸಾಕಷ್ಟು ಜನರ ದೃಷ್ಟಿದೋಷ ನಿವಾರಿಸಿದ್ದರು. ಅನೇಕ ನೇತ್ರತಜ್ಞರನ್ನು ಬೆಳೆಸಿರುವ ಇವರು, ಭಾರತವಲ್ಲದೆ ವಿಶ್ವದ ೫೬ ದೇಶಗಳ ಜನರ ನೇತ್ರ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದರು.
ಅಮೆರಿಕದಲ್ಲಿ ಜನ್ಮತಃ ಕುರುಡಾಗಿದ್ದ ೧೮ ವರ್ಷದ ಯುವತಿಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ಮಾಡಿ ದೃಷ್ಟಿಭಾಗ್ಯ ನೀಡಿದ್ದರು. ಬಹುತೇಕ ಕಾಲ ನ್ಯೂಯಾರ್ಕ್ನಲ್ಲೇ ಇರುತ್ತಿದ್ದ ರೇಷ್ಮಿ ಅವರು ವರ್ಷಕ್ಕೊಮ್ಮೆ ಕಲಬುರಗಿಗೆ ಆಗಮಿಸುತ್ತಿದ್ದರು. ಆ ವೇಳೆಯೂ ಸಾಕಷ್ಟು ಜನರ ನೇತ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದಾರೆ.
ಡಾ.ಚಂದ್ರಪ್ಪ ಅವರಿಗೆ ರಾಜ್ಯ ಸರ್ಕಾರ ೨೦೦೫ರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೆ ಡಾ.ಪಿ.ಎಸ್.ಶಂಕರ ಪ್ರತಿಷ್ಠಾನದ ವಿದ್ಯಾಶ್ರೀ ಸೇರಿ ಸಾವಿರಾರು ಪುರಸ್ಕಾರಗಳು ಅರಸಿ ಬಂದಿವೆ.