

ಮದ್ದೂರು: ವಿಶ್ವಮಾನವ ಸಂದೇಶ ಸಾರಿದ ಮಹಾನ್ ಚೇತನ ಕುವೆಂಪು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಬಣ್ಣಿಸಿದರು.
ಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಥಮವಾಗಿ ಕನ್ನಡ ನಾಡಿಗೆ ತಂದುಕೊಟ್ಟ ಕೀರ್ತಿ ಮಹಾ ಚೇತನ ಕುವೆಂಪು ಅವರಿಗೆ ಸಲ್ಲುತ್ತದೆ ಎಂದರು.
ನಾಡಿನ ಕಲೆ, ಸಂಸ್ಕೃತಿ ಇತಿಹಾಸ ಸಾರುವ ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆ ಮತ್ತು ವಿಶ್ವಕ್ಕೆ ಅನ್ನ ಹಾಕುವ ನೇಗಿಲ ಹಿಡಿದು ಹೊಲದೊಳು ಹಾಡುವ ಉಳುವ ಯೋಗಿಯ ನೋಡಲ್ಲಿ ಗೀತೆಗಳನ್ನು ಪ್ರತಿ ಶಾಲೆ, ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.
ವೈಚಾರಿಕತೆ ಮತ್ತು ದುಂದು ವೆಚ್ಚ ಮತ್ತು ವರದಕ್ಷಿಣೆ ಪದ್ಧತಿಗಳಿಗೆ ಕುವೆಂಪು ಕಡಿವಾಣ ಹಾಕಿ ಮಂತ್ರ ಮಾಂಗಲ್ಯ ಪದ್ಧತಿ ಜಾರಿಗೆ ತಂದರು, ಪ್ರಾಯೋಗಿಕವಾಗಿ ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಮದುವೆ ಮುಖಾಂತರ ಸಾಕ್ಷಿಯಾದರು ಎಂದರು.
ನಿವೃತ್ತ ಶಿಕ್ಷಕ ಆಲೂರು ಚನ್ನಪ್ಪ, ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಗೌರವಾಧ್ಯಕ್ಷ ವಿ ಎಚ್ ಶಿವಲಿಂಗಯ್ಯ, ಮಾಜಿ ಯೋಧ ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ಜವರೇಗೌಡ, ಮುಖಂಡರಾದ ನಾರಾಯಣ, ಪ್ರಸನ್ನಕುಮಾರ್, ಎಂ.ವೀರಪ್ಪ, ರಮೇಶ್, ಪ್ರಭು, ಯಾಕೂಬ್ ಇದ್ದರು.