ವಿಶ್ವಕರ್ಮರು ಕಲಾ ಶ್ರೀಮಂತಿಕೆಯ ಸಂಕೇತ

bkt-30-5
ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದಿಂದ ಕಾಳಿಕಾಂಬಾದೇವಿ ರಥೋತ್ಸವ ಮಂಗಳವಾರ ಸಂಜೆ ಅದ್ಧೂರಿಯಾಗಿ ಜರುಗಿತು.
Published on

ಬಾಗಲಕೋಟೆ: ದೇಶದಲ್ಲಿನ ದೇವಸ್ಥಾನಗಳನ್ನು ವಿಕ್ಷಿಸಿದಾಗ ವಿಶ್ವಕರ್ಮರ ಕಲಾ ಶ್ರೀಮಂತಿಕೆ ಅರಿವಿಗೆ ಬರುತ್ತದೆ. ಹೆಸರೇ ಸೂಚಿಸಿದಂತೆ ವಿಶ್ವಕ್ಕೆ ಕರ್ಮವನ್ನು ಬೋಧಿಸಿದವರು ವಿಶ್ವಕರ್ಮರು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ವಿದ್ಯಾಗಿರಿಯಲ್ಲಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದಿಂದ ಕಾಳಿಕಾಂಬಾ ದೇವಿಯ ೧೭ ನೇ ಪ್ರತಿಷ್ಠಾನ ವರ್ಧಂತಿ ಮಹೋತ್ಸವ ಹಾಗೂ ಗಣೇಶ, ವಿರಾಟ ವಿಶ್ವಕರ್ಮ ಭಗವಾನ ದೇವರುಗಳ ೧೫ ನೇ ವಾರ್ಷಿಕ ಪ್ರತಿಷ್ಠಾಪನಾ ಸಮಾರಂಭದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಲ್ಪಕಲೆ, ಕಾಷ್ಟಶಿಲ್ಪ, ರಜತ ಕಲೆ, ಚಿನ್ನದ ಕುಸುರಿ ಕಲೆಗಳ ಮೂಲಕ ತನ್ನದೇ ಆದ ಪರಂಪರೆ, ಸಂಸ್ಕೃತಿ ಹೊಂದಿರುವ ವಿಶ್ವಕರ್ಮ ಸಮಾಜ ಸಂಘಟನಾತ್ಮಕವಾಗಿ ಬಲಿಷ್ಠವಾಗಬೇಕಾದ ಅಗತ್ಯತೆ ಇದ್ದು, ತನ್ನ ಮೂಲ ವೃತ್ತಿಯ ಜ್ಞಾನ ಮತ್ತು ಗೌರವವನ್ನು ಮುಂದಿನ ಪೀಳಿಗೆಗೆ ಬೆಳೆಸುವ ಕೆಲಸ ಮಾಡಬೇಕು. ತನ್ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ಪ್ರಧಾನಿ ಮೋದಿಯವರು ಜಾರಿಗೆ ತಂದಿರುವ 'ಪಿಎಂ ವಿಶ್ವಕರ್ಮ' ಯೋಜನೆಯಡಿ ಕುಶಲಕರ್ಮಿಗಳು ಮತ್ತು ಕಲೆಗಾರರು ಹೆಚ್ಚಿನ ಸಾಲ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಚಿವಾಲಯದ ನಿವೃತ್ತ ಜಂಟಿ ಕಾರ್ಯದರ್ಶಿ ಕೆ.ಆರ್.ಬಡಿಗೇರ ಮಾತನಾಡಿದರು. ವಿಶ್ವಕರ್ಮ ಸಮಾಜದ ಅಭಿವೃದ್ಧಿ ಸಂಘದ ಅಧ್ಯಕ್ಷ ವಸಂತರಾವ ಕಮ್ಮಾರ, ಉಪಾಧ್ಯಕ ವಿಜಯಲಕ್ಷ್ಮೀ ಪತ್ತಾರ, ಪ್ರಧಾನ ಕಾರ್ಯದರ್ಶಿ ಗುರುರಾಜ ಅಗಳತಕಟ್ಟಿ, ಸಹಕಾರ್ಯದರ್ಶಿ ಎಚ್.ಟಿ.ಪತ್ತಾರ. ದೇವೇಂದ್ರ ಅಗಳತಕಟ್ಟಿ, ವಿಶ್ವಕರ್ಮ ತರುಣ ಸಮಿತಿಯ ಅಧ್ಯಕ್ಷ ಯಂಕಪ್ಪ ಬಡಿಗೇರ, ಬಸವರಾಜ ಬಡಿಗೇರ, ಕಾಳಿಕಾಂಬಾ ಮಹಿಳಾ ಮಂಡಳ ಅಧ್ಯಕ್ಷೆ ಛಾಯಾ ಪತ್ತಾರ, ಭಾರತಿ ಪತ್ತಾರ, ವಿಮಲಾ ಅಗಳತಕಟ್ಟಿ, ರಾಜೇಶ್ವರಿ ಸೋನಾರ ಇತರರು ಇದ್ದರು.

ಶ್ರದ್ಧಾಭಕ್ತಿಯಿಂದ ಕಾಳಿಕಾಂಭಾದೇವಿಯ ರಥೋತ್ಸವ..
ಕಾಳಿಕಾಂಭಾದೇವಿ ರಥೋತ್ಸವ ಮಂಗಳವಾರ ಸಂಜೆ ಅದ್ಧೂರಿಯಾಗಿ ನಡೆಯಿತು. ಬೆಳಗ್ಗೆ ವಿರಾಟ ವಿಶ್ವಕರ್ಮ ಧ್ವಜಾರೋಹಣ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ನವನಗ್ರಹ ಹೋಮ, ನವಕ ಕಲಾ ಹೋಮ, ಕ್ಷೇತ್ರಾಧಿದೇವತೆಗೆ ಹಾಗೂ ಪರಿವಾರ ದೇವತೆಗಳಿಗೆ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ರಾಜೋಪಚಾರ, ಪ್ರಸನ್ನ ಮಹಾಪೂಜೆ, ಮಹಾಮಂಗಳಾರುತಿ ಮಾಡಿ ತೀರ್ಥ ಪ್ರಸಾದ ವಿತರಣೆ ಮಾಡಿಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net