

ಬಾಗಲಕೋಟೆ: ಮನುಷ್ಯ ವಿಶ್ವಮಾನವನಾಗಬೇಕು ಎನ್ನುವ ಕುವೆಂಪು ಅವರ ಸಂದೇಶ ನಿಜಕ್ಕೂ ಮಹತ್ವದ್ದಾಗಿದ್ದು, ಇದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ನವನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುವೆಂಪು ವ್ಯಕ್ತಿಯಲ್ಲ, ಅವರು ಒಂದು ಶಕ್ತಿ ಇದ್ದಂತೆ. ಮನುಜಮತವಾಗಬೇಕು. ವಿಶ್ವಪಥವಾಗಬೇಕು ಎಂದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಕನ್ನಡ ಸಾರಸ್ವತ ಲೋಕದ ದೈತ್ಯ ಪ್ರತಿಭೆ ರಾಷ್ಟ್ರಕವಿ ಕುವೆಂಪು ನೀಡಿದ ವಿಶ್ವಮಾನವ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಮನುಷ್ಯ ವಿಶ್ವಮಾನವನಾಗಿ ಹುಟ್ಟಿದರೂ ಆತ ಸಮಾಜದಲ್ಲಿ ಬೆಳೆಯುತ್ತಾ ಹೋದಂತೆ ಸಾಮಾಜಿಕ ಕಟ್ಟುಪಾಡಿಗೆ ಒಳಪಟ್ಟು ಅಲ್ಪ ಮಾನವನಾಗುತ್ತಾನೆ. ಅದಕ್ಕಾಗಿ ಆತ ತಾನು ಪಡೆಯುವ ಶಿಕ್ಷಣ, ಸಂಸ್ಕೃತಿಯಿಂದ ಮತ್ತೆ ಆತ ವಿಶ್ವಮಾನವನಾಗುವ ಅಗತ್ಯವಿದೆ ಎಂಬುದನ್ನು ಅರಿತಿದ್ದ ಕುವೆಂಪು ಅವರು ಸಾಮಾಜಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಾಹಿತ್ಯವನ್ನು ರಚಿಸುವ ಮೂಲಕ ಆತನನ್ನು ಜಾಗೃತಗೊಳಿಸುವ ಕೆಲಸಕ್ಕೆ ಮುಂದಾದರು ಎಂದರು.
ಕರ್ನಾಟಕದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾದವರು ಕುವೆಂಪು. ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದರು. ಕುವೆಂಪು ಮಹಾಕವಿ ಮತ್ತು ಮಹಾಸಂತರಿದ್ದಂತೆ. ಇವರ ಶ್ರೀರಾಮಾಯಣ ದರ್ಶನಂ ಸೇರಿದಂತೆ ಪ್ರತಿ ಕಾವ್ಯ ಮತ್ತು ನಾಟಕಗಳಲ್ಲೂ ಅವರು ಸೃಷ್ಟಿಸಿರುವ ಪಾತ್ರಗಳು ಮಹತ್ವದ್ದಾಗಿವೆ ಎಂದರು.
ಮಂಥರೆ, ಸೂರ್ಪನಖೀ, ರಾವಣ ಇನ್ನಿತರ ಖಳನಾಯಕ ಪಾತ್ರಗಳನ್ನು ಅತ್ಯಂತ ಶ್ರೇಷ್ಠ ಪದಗಳಲ್ಲಿ ಅಮೋಘವಾಗಿ ಚಿತ್ರಿಸಿದ್ದಾರೆ. ರಾಮಾಯಣದಲ್ಲಿ ಬರುವ ಕಿಷ್ಕಿಂಧಾ ಭಾಗದ ವಾಲಿ-ಸುಗ್ರೀವರ ಚಿತ್ರಣ ಮನಮೋಹಕವಾಗಿದ್ದು, ಪ್ರತಿಯೊಬ್ಬರೂ ಓದಲೇಬೇಕಾದ ಕೃತಿಗಳು. ಮಲೆಗಳಲ್ಲಿ ಮದುಮಗಳು, ಧನ್ವಂತರಿ ಚಿಕಿತ್ಸೆ, ಕಾನೂರು ಹೆಗ್ಗಡತಿ, ಜಲಗಾರ ಸೇರಿದಂತೆ ಅನೇಕ ಮೌಲಿಕ ಕೃತಿಗಳಲ್ಲಿ ಮುಖ್ಯವಾಗಿ ವಿಶ್ವಮಾನವ ಸಂದೇಶ ಸಿಗುತ್ತದೆ. ಈ ಕಾರಣದಿಂದಲೇ ಅವರ ಅನೇಕ ಪದ್ಯಗಳು ಸಿನಿಮಾ ಹಾಡುಗಳಾಗಿವೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಕೇಶವ ಸಾಲಮಂಟಪಿ ರಾಷ್ಟ್ರಕವಿಯವರು ಈ ನಾಡಿನಲ್ಲಿ ಸರ್ವ ಜನಾಂಗದ ಪರಿಕಲ್ಪನೆಯ ಸಾರವನ್ನು ಸಾರಿದವರು ಕುವೆಂಪು ಎಂದು ವಿಶೇಷವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳ್‍ಕರ್, ಕರ್ಣಕುಮಾರ ಜೈನಾಪುರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸಿ. ಡೂಗನವರ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.