

ಬಾಗಲಕೋಟೆ: ತಳಸಮುದಾಯದ ವಿಶಿಷ್ಟ ಕಲೆಗಳ ಕುರಿತು ಹಾಗೂ ಪೂರ್ವಜರು ಬೆಳೆಸಿಕೊಂಡು ಬಂದಂತಹ ಸಾಂಸ್ಕೃತಿಕ ಹಿನ್ನಲೆಯನ್ನು ಮುನ್ನಲೆಗೆ ತರಲು ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಕಾರ್ಯಕ್ರಮವನ್ನು ಆಯೋಜಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಉತ್ಸವ ಸಮಿತಿಯ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ಜುರಗುತ್ತಿದ್ದು, ಇದೊಂದು ವಿಶಿಷ್ಟ ಯೋಜನೆ. ಇದಕ್ಕಾಗಿ ೨೦೨೨-೨೩ ನೇ ಸಾಲಿನಲ್ಲಿ ೫ ಕೋಟಿ ರೂ. ಅನುದಾನ ಸರ್ಕಾರ ಮೀಸಲಿಟ್ಟಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಲಸಂಸ್ಕೃತಿ ಕನ್ನಡ ಸಂಸ್ಕೃತಿ ಉಳಿಸಲು ಕಾರ್ಯಕ್ರಮ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ನಮಗೆ ಸಹಕಾರ ನೀಡಿದರು. ರಾಜ್ಯದ ೩೧ ಜಿಲ್ಲೆಗಳಲ್ಲಿ ೫ ಕಲಾ ಪ್ರಕಾರಗಳಜತೆ ಹಾಗೂ ಪ್ರತಿ ಜಿಲ್ಲೆಗೆ ೫೦ ಜನ ಕಲಾಸಕ್ತರಿಗೆ ತರಬೇತಿ ನೀಡಲು ಯೋಜಿಸಿದೆ. ೩೧ ಜಿಲ್ಲೆಗಳಲ್ಲಿ ತರಬೇತಿ ನಡೆಯುತ್ತಿದೆ ಎಂದರು.
ಜಿಲ್ಲಾಮಟ್ಟದಲ್ಲಿ ತರಬೇತಿ ಪಡೆದ ಕಲಾ ತಂಡಗಳನ್ನು ಜಿಲ್ಲೆಯಿಂದ ೨ ತಂಡ ಉತ್ಸವದಲ್ಲಿ ಭಾಗವಹಿಸಲಿವೆ. ೬೨ ತಂಡ ಇದರಲ್ಲಿ ಭಾಗವಹಿಸಿವೆ. ರಾಜ್ಯದ ೩೧ ಜಿಲ್ಲೆಯ ೧೫೫ ಕಲಾ ಪ್ರಕಾರ ೧೫೫೦ ಯುವ ಶಿಬಿರಾರ್ಥಿಗಳು ೧೫೫ ನುರಿತ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ. ರಾಜ್ಯ ಮಟ್ಟದ ಉತ್ಸವದ ಸಮಾವೇಶ ಸಮಾರೋಪ ಬೆಂಗಳೂರಿನಲ್ಲಿ ನಡೆಯಲಿದೆ . ರಾಷ್ಟ್ರಪತಿಯವರನ್ನು ಆಹ್ವಾನ ನೀಡಲಾಗಿದೆ. ನಶಿಸಿಹೋಗುತ್ತಿರುವ ತಳಸಮುದಾಯ ವಿಶಿಷ್ಟ ಕಲೆಗಳನ್ನು ಮುನ್ನಲೆಗೆ ತರಲು ವಿಶಿಷ್ಟ ಯೋಜನೆ ರೂಪಿಸಲಾಗಿದೆ ಎಂದರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸುವ ಕಲಾವಿದರಿಗೆ ೩೦೦ ರೂ.ನೀಡಲಾಗುತ್ತಿದೆ. ಕುಟುಂಬದಲ್ಲಿ ಇರುವ ಕಲಾವಿದರು ಹಾಗೂ ಯುವಕರನ್ನು ತರಬೇತಿಗೆ ಬಳಸಿಕೊಳ್ಳಲಾಗಿದೆ. ಐದು ಕಲಾ ತಂಡಗಳನ್ನು ಜಿಲ್ಲೆಯಲ್ಲಿ ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ ಎಂದರು.
ಸಮಿತಿ ಜಿಲ್ಲಾ ಸಂಚಾಲಕರಾದ ಸತೀಶ ಮಾದರ, ಯಲ್ಲಪ್ಪ ನಾರಾಯಣಿ ಇತರರು ಇದ್ದರು.