ವಿವಿಧೆಡೆ ಭಕ್ತಿಯ ಸಮರ್ಪಣೆ

14SIRSI1
Published on

ಶಿರಸಿ: ತಾಲೂಕಿನ ಸಹಸ್ರಲಿಂಗದಲ್ಲಿ ಗುರುವಾರ ಸಹಸ್ರಾರು ಭಕ್ತರು ಸಂಕ್ರಾಂತಿಯ ಪುಣ್ಯ ಸ್ನಾನ ಮಾಡಿ ಶಿವನ ದರ್ಶನ ಪಡೆದು ಪುನೀತರಾದರು. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಹಾವೇರಿ, ಶಿವಮೊಗ್ಗದಿಂದ ಭಕ್ತರು ಕುಟುಂಬ ಸಮೇತರಾಗಿ ಸಹಸ್ರಲಿಂಗಕ್ಕೆ ಆಗಮಿಸಿದ್ದರು. ಗ್ರಾಮೀಣ ಠಾಣೆಯ ಪೋಲಿಸರು ಸಹಸ್ರಲಿಂಗದಲ್ಲಿ ಬಂದೋಬಸ್ತ್ ಒದಗಿಸಿದರು. ಇದರ ಜತೆ ಬನವಾಸಿಯ ಮಧುಕೇಶ್ವರ ದೇವರ ವಾರ್ಷಿಕ ಮಕರ ಸಂಕ್ರಾಂತಿ ಉತ್ಸವ ಸರಳವಾಗಿ ನೆರವೇರಿತು. ಗುಡ್ನಾಪುರ ಬಂಗಾರೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತರು ಗುಡ್ನಾಪುರ ಕೆರೆಯಲ್ಲಿ ಪುಣ್ಯ ಸ್ನಾನ ನೆರವೇರಿಸಿ ದೇವರ ದರ್ಶನ ಪಡೆದರು. ಶೀಗೇಹಳ್ಳಿಯ ಚನ್ನಕೇಶವ ದೇವಾಲಯದಲ್ಲಿ ಸಂಕ್ರಮಣದ ನಿಮಿತ್ತ ಪುರುಷಸೂಕ್ತ ಹವನ, ಕುಂಕುಮಾರ್ಚನೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net