ವಿವಿಧತೆಯಲ್ಲಿ ಏಕತೆ ದಿವ್ಯ ಮಂತ್ರವಾಗಲಿ

28 vpt 2
Published on

ವಿರಾಜಪೇಟೆ: ಸಂಸ್ಕೃತಿಗಳ ಸಮಾಗಮದಿಂದ ಸಮುದಾಯ, ಸಂಘಟನೆಗಳ ಏಳಿಗೆ ಸಾಧ್ಯವಾಗಬೇಕಾದರೆ ವಿವಿಧತೆಯಲ್ಲಿ ಏಕತೆ ದಿವ್ಯ ಮಂತ್ರವಾಗಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.

ಶ್ರೀಮುತ್ತಪ್ಪನ್ ಮಲಯಾಳಿ ಸಮಾಜ ಮೀನುಪೇಟೆ ವಿರಾಜಪೇಟೆ ವತಿಯಿಂದ ಶ್ರೀಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ 17ನೇ ವರ್ಷದ ಓಣಂ ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಡಗು ಜಿಲ್ಲೆಗೂ ನೆರೆಯ ಕೇರಳ ರಾಜ್ಯಕ್ಕೂ ಅವಿನಾಭಾವ ಸಂಬಂಧವಿದೆ. ಕೊಡಗಿನಲ್ಲಿ ಆರಾಧಿಸುವ ಅನೇಕ ದೈವ, ದೇವ-ದೇವಿಯರು ಕೇರಳ ರಾಜ್ಯದಿಂದ ಬಂದಿರುವುದಾಗಿದೆ. ಮಲಯಾಳಿ ಸಮಾಜದವರು ಆಚರಿಸುವ ಓಣಂ ಹಬ್ಬ ವಿಶಿಷ್ಟ ಆಚರಣೆ ಪದ್ಧತಿಯಾಗಿದೆ. ಧೀಮಂತ ಸಂಸ್ಕೃತಿ, ಸಂಪ್ರದಾಯ, ಆಚರಣಾ ವಿಧಿ ವಿಧಾನಗಳು, ಆಚಾರ ವಿಚಾರಗಳು ವಿನಾಶವಾಗದೆ ಎಂದಿಗೂ ಜೀವಂತವಾಗಿಸಿರುವ ನಿಟ್ಟಿನಲ್ಲಿ ಸಮುದಾಯಗಳು ಸಂಘಟನೆಗಳು ಪ್ರಯತ್ನ ಪಡಬೇಕು. ಸಂಸ್ಕೃತಿಗಳ ಅನಾವರಣಕ್ಕೆ ಸಂಘಟನೆಯ ಕಾರ್ಯಕ್ರಮಗಳು ಪೂರಕವಾಗಿದೆ. ಸಮುದಾಯ ಬೆಳೆಯುವುದರೊಂದಿಗೆ ಸಾಮಾಜಿಕ ಕಳಕಳಿಗೂ ಗೌರವ ಸೂಚಿಸುವಂತಾಗಬೇಕು. ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಸಮುದಾಯ, ಸಂಪ್ರದಾಯ, ಸಂಸ್ಕೃತಿ ಆಚಾರ ವಿಚಾರ ಪದ್ಧತಿಗಳು ಎಂದಿಗೂ ಶಾಶ್ವತ. ಇದನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮಲಯಾಳಿಗರ ಹಬ್ಬಗಳಲ್ಲಿ ಓಣಂ, ಹಬ್ಬವು ವಿಶಿಷ್ಟ ಸ್ಥಾನ ಪಡೆದಿದೆ. ಹೊಸ ವರ್ಷದ ಬರುವಿಕೆ ಮತ್ತು ಹೊಸತನವನ್ನು ಅಳವಡಿಸಿಕೊಂಡು ಜೀವನ ನಡೆಸುವುದು ಸಮುದಾಯದ ಪದ್ಧತಿಯಾಗಬೇಕು. ಭವ್ಯ ಭಾರತದ ಸಾಂಪ್ರದಾಯಿಕ ಸಂಸ್ಕೃತಿಗಳು ಮರೆಯಾಗದೆ ಜೀವಂತವಾಗಿರಿಸಬೇಕು ಎಂದು ಹೇಳಿದರು.

ಶ್ರೀಮುತ್ತಪ್ಪ ಮಲಯಾಳಿ ಸಮಾಜ ಅದ್ಯಕ್ಷ ಪಿ.ಜಿ. ಸುಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆ ಸ್ಥಾಪನೆಗೊಂಡು 16 ವರ್ಷಗಳು ಸಂದಿವೆ. ಸ್ಥಾಪಕರಾದ ದಿ.ಇ.ಸಿ.ಜೀವನ್ ಅವರ ಪರಿಕಲ್ಪನೆಗೆ ಮಿಗಿಲಾಗಿ ಸಮುದಾಯದವರಿಗೆ ಹೊಸ ಹೊಸ ಕಾರ್ಯಕ್ರಮ ನೀಡುತ್ತಾ ಬಂದಿದೆ. ಸಂಘಟನೆಯ ಬಲವರ್ಧನೆಗೆ ಸದಸ್ಯತ್ವ ಬಹುಮುಖ್ಯ ಅದರೇ ಸಮುದಾಯದವರು ಕೆಲವರು ಸದಸ್ಯತ್ವ ಪಡೆಯಲು ಹಿಂದೇಟು ಹಾಕುತ್ತಿರುವುದು ವಿಷಾದಕರ. ಸಮುದಾಯದ ಒಳಿತಿಗಾಗಿ ಶಕ್ತಿಮೀರಿ ಪ್ರಯತ್ನ ಸಾಗುತ್ತಿದೆ ಎಂದರು.

ಹಿಂದು ರುದ್ರಭೂಮಿ ಅಭಿವೃದ್ಧಿಗಾಗಿ ಸಹಾಯ ಧನ ನೀಡುವಂತೆ ಸಂಘಟನೆ ವತಿಯಿಂದ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರಿಗೆ ಮನವಿ ಪತ್ರ ನೀಡಲಾಯಿತು. ಮನವಿ ಸ್ವೀಕರಿಸಿದ ಶಾಸಕದ್ವಯರು ತಲಾ 5 ಲಕ್ಷ ರೂ.ನೀಡುವ ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷ ಎಂ.ಕೆ.ದೇಚಮ್ಮ ಕಾಳಪ್ಪ ಮಾತನಾಡಿದರು. ಪುರಸಭೆ ಸದಸ್ಯರಾದ ಎಂ.ಕೆ.ಕುಟ್ಟಪ್ಪ, ಹಮೀದ್, ಎಸ್‌ಎನ್‌ಡಿಪಿ ವಿರಾಜಪೇಟೆ ಶಾಖೆ ಅಧ್ಯಕ್ಷ ನಾರಾಯಣ, ಶ್ರೀಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಕಾರ್ಯದರ್ಶಿ ಕೆ.ಪಿ.ಪ್ರಭಾಕರ, ಹಿಂದು ಮಲಯಾಳಿ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಶೀಭಾ ಪೃಥ್ವಿನಾಥ್ ಹಾಜರಿದ್ದರು.

ಓಣಂ ಆಚರಣೆಯ ಪ್ರಯುಕ್ತ ಮಲಯಾಳಿ ಸಂಸ್ಕೃತಿ ಬಿಂಬಿಸುವ ಕಥಕ್ಕಳಿ, ಮೋಹಿನಿ ಅಟ್ಟಂನ ರೂಪಕದ ಪ್ರಸ್ತುತಿಯೊಂದಿಗೆ ಮಾವೇಲಿ ಚಕ್ರವರ್ತಿಯನ್ನು ದೇಗುಲದಲ್ಲಿ ಬರಮಾಡಿಕೊಂಡು, ಸಮುದಾಯದವರು ಮೆರವಣಿಗೆಯಲ್ಲಿ ಸಾಗಿದರು.

ಕೇರಳ ರಾಜ್ಯದ ಚಿಂಗಾರಿ ಮೇಳಂ, ಚೆಂಡೆ ಮೇಳ ಹಾಗೂ ದೇವಿಯ ವೇಷಭೂಷಣ ಧರಿಸಿದ ತಂಡಗಳು ಮೆರವಣಿಗೆಗೆ ಸಾತ್ ನೀಡಿದವು.

ದೇಗುಲದ ಮುಂಭಾಗದಿಂದ ಸಾಗಿದ ಶೋಭಾಯಾತ್ರೆ ಖಾಸಗಿ ಬಸ್ ನಿಲ್ದಾಣ, ಸುಣ್ಣದ ಬೀದಿ, ಮಾಂಸ ಮಾರುಕಟ್ಟೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ಮುಖ್ಯರಸ್ತೆಯಿಂದ ದೇಗುಲದಲ್ಲಿ ಅಂತಿಮವಾಯಿತು.

ದೇಗುಲದ ಆವರಣದಲ್ಲಿ ಕೇರಳದ ವಿಶಿಷ್ಟ ಖಾದ್ಯಗಳ ಓಣಂ ಸದ್ಯ ವಿಶೇಷ ಭೋಜನದ ಸವಿಯನ್ನು ಸಮುದಾದವರು ಸವಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಶಿಷ್ಟ ಸಾಧಕರು, ದೇಗುಲದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೈವ ನರ್ತಕರು, ಚೆಂಡೆ ವಾದಕರು ಮತ್ತು ಇತರರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಸಮುದಾಯದ ವಿದ್ಯಾರ್ಥಿಗಳಿಂದ ತಿರುವಾದಿರ ನೃತ್ಯ, ಮಾವೇಲಿ ಚಕ್ರವರ್ತಿಯ ಹಿನ್ನೆಲೆಯುಳ್ಳ ನೃತ್ಯ ರೂಪಕ ಹಾಗೂ ಮೆಗಾ ಶೋ ಕಾರ್ಯಕ್ರಮ ವೇದಿಕೆಯಲ್ಲಿ ಪ್ರದರ್ಶನ ಕಂಡಿತು.

ಶ್ರೀಮುತ್ತಪ್ಪ ಮಲಯಾಳಿ ಸಮಾಜ ವಿರಾಜಪೇಟೆ ಯ ಪದಾಧಿಕಾರಿಗಳು, ಶ್ರೀಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಓಣಂ ಆಚರಣಾ ಸಮಿತಿ ಸದಸ್ಯರು, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆ ಕಂಡಿರುವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net