

ಪಿರಿಯಾಪಟ್ಟಣ: ಆರ್‌ಎಸ್‌ಎಸ್ ಸಂಘಟನೆಗೆ ಶತಮಾನೋತ್ಸವ ಸಂಭ್ರಮದ ಹಿನ್ನೆಲೆ ಪಟ್ಟಣದಲ್ಲಿ ವಿವಿಧ ಹಿಂದುಪರ ಸಂಘಟನೆಗಳು ಭಾನುವಾರ ಹಮ್ಮಿಕೊಂಡಿದ್ದ ಪಥ ಸಂಚಲನ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪಟ್ಟಣದ ವೈದೇಶ್ವರ ಬಡಾವಣೆಯಲ್ಲಿರುವ ಶ್ರೀವೈದ್ಯೇಶ್ವರ ದೇವಾಲಯದ ಮುಂಭಾಗದಿಂದ ಅಲಂಕೃತ ವಾಹನದಲ್ಲಿ ಭಾರತಾಂಬೆಯ ಭಾವಚಿತ್ರವನ್ನು ಇರಿಸಿ ಸುಮಾರು 250ಕ್ಕೂ ಹೆಚ್ಚು ಸದಸ್ಯರೊಂದಿಗೆ ಆರಂಭಗೊಂಡದ ಪಥ ಸಂಚಲನ ಪಟ್ಟಣದ ಬಿ.ಎಂ.ರಸ್ತೆಯಲ್ಲಿ ಸಾಗಿ ನೆಹರು ರಸ್ತೆ, ಸಿಲ್ವರ್ ಜ್ಯೂಬಿಲಿ ರಸ್ತೆ, ದೊಡ್ಡಬೀದಿ, ನುಗ್ಗೇಹಳ್ಳಿ ಬೀದಿ, ಪುಷ್ಪಾ ಕಾನ್ವೆಂಟ್ ರಸ್ತೆಯ ಮೂಲಕ ಗೋಣಿಕೊಪ್ಪ ರಸ್ತೆಗೆ ತಲುಪಿ ಮುತ್ತಯ್ಯ ಬಡಾವಣೆಯಲ್ಲಿ ಧ್ವಜ ವಂದನೆ ಬಳಿಕ ಸಮಾಪ್ತಿಗೊಂಡಿತು.
ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಪಥ ಸಂಚಲನ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ಗೋಪಾಲಕೃಷ್ಣ, ಪೊಲೀಸ್ ಇನ್‌ಸ್ಪೆಕ್ಟರ್ ಪುನೀತ್ ನೇತೃತ್ವದ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ, ನಿಕಟಪೂರ್ವ ಅಧ್ಯಕ್ಷ ಎಂ.ಎಂ.ರಾಜೇಗೌಡ, ವಿಎಚ್‌ಪಿ ಸಂಚಾಲಕ ಷಣ್ಮುಖ ರಾವ್, ಮುಖಂಡರಾದ ವಿಕ್ರಂರಾಜ್, ಕಿರಣ್ ಜಯರಾಮೇಗೌಡ, ಪಿ.ಜೆ.ರವಿ, ಶಿವರಾಂ, ಚಂದ್ರಶೇಖರ್, ಹರೀಶ್, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.