

ಹುಣಸೂರು: ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ವಿವಿಧ ಹಾಡಿಗಳು, ಸರ್ಕಾರಿ ಶಾಲೆಗಳು ಮತ್ತು ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್‌ಕುಮಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ವೇಳೆ ಹಾಡಿ ಗಿರಿಜನರು ವಸತಿ ಸೌಲಭ್ಯಕ್ಕಾಗಿ ಆಗ್ರಹಿಸಿದರೆ, ಆಶ್ರಮ ಶಾಲೆ ಹಂಗಾಮಿ ಶಿಕ್ಷಕರು ವೇತನ ವಿಳಂಬ ಕುರಿತು ಅವಲತ್ತುಕೊಂಡರು. ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯನಿರ್ವಹಿಸದಿರುವ ಬಗ್ಗೆ ದೊಡ್ಡಹೆಜ್ಜೂರು ಗ್ರಾಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೊದಲು ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಬಳಿ ಇಂದಿಗೂ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯನಿರ್ವಹಿಸದ ಬಗ್ಗೆ ಪ್ರಶ್ನಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೇಡಿಕೆ ಮತ್ತು ವಸೂಲಾತಿ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು. ಶೀಘ್ರ ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭಕ್ಕೆ ಆದೇಶಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ 15ನೇ ಹಣಕಾಸು ಯೋಜನೆಯಡಿ ನಿರ್ಮಾಣಗೊಂಡಿರುವ ಶೌಚಗೃಹ ಕಾಮಗಾರಿ ಪರಿಶೀಲಿಸಿದರು. ಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸಿರುವುದರ ಕುರಿತು ಮಾಹಿತಿ ಕಲೆ ಹಾಕಿದರು.
ಮನೆ ಕೊಡಿ ಸ್ವಾಮಿ: ನಂತರ ಕಿರಂಗೂರು ಗ್ರಾಪಂ ವ್ಯಾಪ್ತಿಯ ಶಂಕರಪುರ ಹಾಡಿಗೆ ತೆರಳಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು. ಈ ವೇಳೆ ಅಲ್ಲಿನ ಸ್ಥಳೀಯರು ವಸತಿ ಕುರಿತು ಬೇಡಿಕೆ ಸಲ್ಲಿಸಿದ್ದು, ಒಂದೇ ಮನೆಯಲ್ಲಿ ಎರಡು, ಮೂರು ಕುಟುಂಬಗಳು ವಾಸಿಸುತ್ತಿದ್ದೇವೆ. ನಿವೇಶನ ವಂಚಿತರಾದವರಿಗೆ ಸೂಕ್ತ ವಸತಿ ಕಲ್ಪಿಸುವಂತೆ ಆಗ್ರಹಿಸಿದರು. ಈ ಭಾಗದಲ್ಲಿ ಕಂದಾಯ ಭೂಮಿಯಿರುವುದಾಗಿ ತಿಳಿದುಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಕ್ರಮವಹಿಸುವುದಾಗಿ ಸಿಇಒ ಭರವಸೆ ನೀಡಿದರು.
ವೇತನ ವಿಳಂಬ:
ಉಮ್ಮತ್ತೂರು ಗ್ರಾಮ ಪಂಚಾಯಿತಿಯ ನಲ್ಲೂರು ಪಾಲ ಆಶ್ರಮ ಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವೇಳೆ, ಆಶ್ರಮಶಾಲೆಯ ಹಂಗಾಮಿ ಶಿಕ್ಷಕರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಮೂರು ತಿಂಗಳಿಗೊಮ್ಮೆ ವೇತನ ನೀಡಿದರೆ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಶಿಕ್ಷಕರು ಅವಲತ್ತುಕೊಂಡರು. ಶಾಲೆಗಳಲ್ಲಿ ಸಮರ್ಪಕ ಮೂಲಸೌಕರ್ಯ ಮತ್ತು ಹೊಸದಾಗಿ ಶೌಚಗೃಹವನ್ನು ನರೇಗಾ ಯೋಜನೆಯಡಿ ನಿರ್ಮಿಸಲು ಪಿಡಿಒಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಎಇಇ ಪುಟ್ಟರಾಜು, ಸಿಡಿಪಿಒ ಹರೀಶ್, ಪರಿಶಿಷ್ಟ ಪಂಗಡ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್, ತಾಲೂಕು ಯೋಜನಾಧಿಕಾರಿ ಎಂ.ಎಸ್.ರಾಜೇಶ್, ನರೇಗಾ ಸಹಾಯಕ ನಿರ್ದೇಶಕ ಎಸ್.ಗಿರಿಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಮಹದೇವ, ಟಿ.ಭವ್ಯಾ, ನರೇಗಾ ಸಹಾಯಕ ಇಂಜಿನಿಯರ್ ನಂದ ಶ್ರೀನಿವಾಸ್, ಮದನ್, ಅನಿಲ್, ಸಿಬ್ಬಂದಿ ಹಾಜರಿದ್ದರು.
ಹುಣಸೂರು ತಾಲೂಕು ದೊಡ್ಡಹೆಜ್ಜೂರು ಗ್ರಾಮದ ಸರ್ಕಾರಿ ಶಾಲೆಗೆ ಸಿಇಒ ಎಸ್.ಯುಕೇಶ್‌ಕುಮಾರ್ ಭೇಟಿ ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕಿದರು. ಇಒ ಕೆ.ಹೊಂಗಯ್ಯ, ಪಿಡಿಒ ಮಹದೇವ್, ಎಸ್.ಗಿರಿಧರ್, ನಂದ ಶ್ರೀನಿವಾಸ್ ಇತರರಿದ್ದರು. ಶಂಕರಪುರ ಹಾಡಿಯಲ್ಲಿ ಗಿರಿಜನ ಮಹಿಳೆಯರು ವಸತಿ ಸೌಲಭ್ಯಕ್ಕಾಗಿ ಆಗ್ರಹಿಸಿದರು.