ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಾಳೆ

Published on

ಚನ್ನರಾಯಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಆ.16ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ತಿಳಿಸಿದರು.

ಧರ್ಮ ರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘಟನೆಗಳಿಂದ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಕ್ಷಾಂತರ ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಪಾವಿತ್ರ್ಯತೆ ಹೊಂದಿದೆ. ಕೆಲವರಿಂದ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಅಸಂಖ್ಯಾತ ಭಕ್ತರನ್ನು ಕೆರಳಿಸಿದೆ. ಈಗಾಗಲೇ ಎಸ್‌ಐಟಿ ತನಿಖೆ ಕೈಗೊಂಡಿದೆ. ವೀರೇಂದ್ರ ಹೆಗ್ಗಡೆ ಅವರು ತನಿಖೆ ಸ್ವಾಗತಿಸಿದ್ದಾರೆ. ಹೀಗಿದ್ದರೂ ಯುಟ್ಯೂಬ್ ಸೇರಿದಂತೆ ಇತರ ಜಾಲತಾಣಗಳಲ್ಲಿ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಕೆಲ ಕಿಡಿಗೇಡಿಗಳು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರಗಳು ಮಾಡದ ಅಭಿವೃದ್ಧಿ ಕೆಲಸಗಳನ್ನು ಧರ್ಮಸ್ಥಳದ ಧರ್ಮದರ್ಶಿ ಡಾ.ವೀರೇಂದ್ರ ಹೆಗ್ಗಡೆ ಮಾಡುತ್ತಾ ಬಂದಿದ್ದಾರೆ. ಯಾರೋ ಒಬ್ಬ ಅನಾಮಿಕ ತಾನು ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದನ್ನೇ ನಂಬಿ ಸರ್ಕಾರ ಶೋಧ ನಡೆಸುತ್ತಿದೆ. ಎಸ್‌ಐಟಿ ತನಿಖಾ ತಂಡ ರಚಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅನಾಮಿಕ ವ್ಯಕ್ತಿ ತೋರಿಸಿದ 16 ಸ್ಥಳಗಳಲ್ಲೂ ಯಾವುದೇ ಶವಗಳ ಅಸ್ಥಿಪಂಜರ ಸಿಕ್ಕಿಲ್ಲ. ಇದು ಅನ್ಯಧರ್ಮೀಯರು ಹಿಂದು ಧರ್ಮದ ಹೂಡಿರುವ ಕುತಂತ್ರವಾಗಿದೆ. ಹಿಂದು ಧರ್ಮದ ವಿರುದ್ಧ ಅಪಪ್ರಚಾರ ಮಾಡಲೆಂದೇ ಅನಾಮಿಕ ವ್ಯಕ್ತಿಯನ್ನು ಸೃಷ್ಟಿಸಲಾಗಿದೆ. ಅನಾಮಿಕ ಮುಸುಕುಧಾರಿ ವ್ಯಕ್ತಿಯನ್ನು ಮೊದಲು ತನಿಖೆಗೊಳಪಡಿಸಿ ಸತ್ಯಾಸತ್ಯತೆ ತಿಳಿಯಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕತ್ತರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಮಾತನಾಡಿ, ಸೌಜನ್ಯಾಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ದಾಳಿಗೆ ಹೊರಟ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣನವರ್, ಸಮೀರ್, ಸಂತೋಷ ಶೆಟ್ಟಿ, ಜಯಂತ, ಅಜಯ್ ಅಂಚಚ್ ಇವರು ಷಡ್ಯಂತ್ರ ಹಾಗೂ ಅಪಪ್ರಚಾರ ಮಾಡುತ್ತಿರುವುದರ ಹಿನ್ನೆಲೆ ಏನು? ಸುಳ್ಳು ಆರೋಪ ಮಾಡಲು ಪ್ರಚೋದಿಸುತ್ತಿರುವವರು ಯಾರು? ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ? ಎಂಬುದನ್ನು ತಿಳಿಯಲು ಸೂಕ್ತ ತನಿಖೆ ನಡೆಸಬೇಕಾಗಿದೆ. ತಮ್ಮ ಮೊಬೈಲ್‌ನಲ್ಲಿ ಸಾಕ್ಷಿಗಳಿವೆ ಎಂದು ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಘಂಟಾಘೋಷವಾಗಿ ಭಾಷಣ ಮಾಡುತ್ತಿರುವ ಇವರನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆ ಬಯಲಿಗೆ ಎಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಮತ್ತೊಂದು ತನಿಖಾ ತಂಡ ರಚಿಸಿ ತಕ್ಷಣ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.

16ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಾಥಾ ಹಮ್ಮಿಕೊಂಡಿದ್ದು, ನಂತರ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಪುರವರ್ಗ ಹಿರೆಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್.ಅಶೋಕ್, ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಬಿಹಳ್ಳಿ ಗಿರೀಶ್, ತಾಲೂಕು ಕಾರ್ಯದರ್ಶಿ ನಾಗೇಶ್ ಹಿರಿಬಿಳ್ತಿ, ಮುಖಂಡರಾದ ಸಿ.ಪಿ.ಕುಮಾರ್, ಗೋಪಿ, ಯಶೋದ ಜೈನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net