

ವಿಜಯವಾಣಿ ಸುದ್ದಿಕಾಲ ಯಾದಗಿರಿ
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮತ್ತು ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರೈತರ ಎಲ್ಲ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವಿಸ್ತರಿಸಿ ಗ್ರಾಮಮಟ್ಟದಲ್ಲಿ ಬೆಳೆ ಹಾನಿ ನಿರ್ಧರಿಸಬೇಕು. ವಿಮಾ ಕಂಪನಿಗಳು ಉಳಿಸಿಕೊಂಡಿರುವ ಬಾಕಿ ಹಣ ರೈತರ ಖಾತೆಗೆ ಕೂಡಲೇ ಹಾಕಬೇಕು. ಫಸಲು ಪಹಣಿ ದುರಸ್ತಿ, ಪಕ್ಕಾಪೋಡು, ಹದ್ದುಬಸ್ತು ಶುಲ್ಕ ದುಬಾರಿಯಾಗಿದ್ದು ಅದನ್ನು ಕೂಡಲೇ ಇಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಪದಾಧಿಕಾರಿಗಳಾದ ನಾಗರತ್ನಮ್ಮ ಪಾಟೀಲ್, ಶರಣು ಮಂದರವಾಡ, ಚಂದ್ರಕಲಾ ಬಾಗೂರು, ಮುದ್ದಣ್ಣ ಅಮ್ಮಾಪುರ, ಮಲ್ಕಣ ಚಿಂತಿ, ಸಿದ್ದಣ್ಣ ಕುಂಬಾರಪೇಟೆ, ಮಲ್ಲಣ್ಣ ನೀಲಹಳ್ಳಿ ಹಾಗೂ ಶಂಕರ ಜಾಧವ್ ಇತರರಿದ್ದರು.