

ವಿಜಯವಾಣಿ ಸುದ್ದಿಜಾಲ ಕಾರವಾರ
ವಿವಾದದ ಬಳಿಕ ಉತ್ತರ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೇಮಕಾತಿ ಆದೇಶವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಶುಕ್ರವಾರ ತಡೆ ಹಿಡಿದಿದೆ.
ಪರೇಶ ಮೇಸ್ತ ಕೊಲೆ ಆರೋಪಿ ಹೊನ್ನಾವರದ ಜಮಾಲ್ ಆಜಾದ್ ಅಣ್ಣಿಗೇರಿಯನ್ನು ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿರುವುದಕ್ಕೆ ತೀವ್ರ ಆಕ್ಷೇಪ ಕೇಳಿ ಬಂದಿತ್ತು.
ಬಿಜೆಪಿ ಕಾರ್ಯಕರ್ತರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಸ್ವತಃ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮೊಹಮದ್ ಅನೀಸ್ ತಹಸೀಲ್ದಾರ್ ಅವರು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಬರೆದು ಆಜಾದ್ ಅಣ್ಣಿಗೇರಿ ನೇಮಕದ ಬಗ್ಗೆ ಆಕ್ಷೇಪಿಸಿದ್ದರು. ಸಚಿವರ ಕಚೇರಿ ಸೂಚನೆಯಂತೆ ತನ್ನದೇ ಆದೇಶಕ್ಕೆ ತಡೆ ನೀಡಿ ರಾಜ್ಯ ವಕ್ಫ್ ಬೋರ್ಡ್ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.
ಏನಿದು ವಿವಾದ..?
ಆಗಸ್ಟ್ 1 ರಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯನ್ನು ನೇಮಿಸಿ ರಾಜ್ಯ ವಕ್ಫ್ ಮಂಡಳಿ ಆದೇಶಿಸಿತ್ತು. ಮೊಹಮದ್ ಅನೀಸ್ ತಹಸೀಲ್ದಾರ್ ಅಧ್ಯಕ್ಷರಾದರೆ, ಜಮಾಲ್ ಆಜಾದ್ ಸೇರಿ 6 ಜನ ಉಪಾಧ್ಯಕ್ಷರು, ಹಾಗೂ 14 ಸದಸ್ಯರನ್ನು ನೇಮಕ ಮಾಡಲಾಗಿತ್ತು. ಅದರಲ್ಲಿ ತಾನು ಸಲಹೆ ನೀಡದ ಇಬ್ಬರ ಹೆಸರುಗಳೂ ಸೇರಿಕೊಂಡಿವೆ ಎಂಬುದು ಅನೀಸ್ ತಹಸೀಲ್ದಾರ್ ಅವರ ಆರೋಪ.
ಬಿಜೆಪಿಗೆ ಮುಜುಗರ
2017 ರ ಡಿಸೆಂಬರ್ 8 ರಂದು ಹೊನ್ನಾವರದ ಯುವಕ ಪರೇಶ ಮೇಸ್ತ ಶವ ಕೆರೆಯೊಂದರಲ್ಲಿ ಪತ್ತೆಯಾಗುತ್ತು. ಆತನ ಕೊಲೆ ಆರೋಪದ ಮೇಲೆ ಪೊಲೀಸರು ಆಜಾದ್ ಅಣ್ಣಿಗೇರಿ ಸೇರಿ 6 ಜನರನ್ನು ಬಂಧಿಸಿದ್ದರು. ಆದರೆ, ನಂತರವೂ ಜಿಲ್ಲೆಯಲ್ಲಿ ಇದೇ ವಿಚಾರವಾಗಿ ಸಾಕಷ್ಟು ಗಲಾಟೆ ನಡೆದ ಕಾರಣ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು.
ಸಿಬಿಐ ಆಜಾದ್ ಅಣ್ಣಿಗೇರಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಇದೇ ವಿಚಾರವಾಗಿ ಎದ್ದ ಹಿಂದುತ್ವದ ಅಲೆ ಕರಾವಳಿಯಲ್ಲಿ 2018 ರ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಎಂಎಲ್‌ಎ ಸೀಟು ಜಯಿಸಲು ಕಾರಣವಾಗಿತ್ತು.
ಈಗ ಬಿಜೆಪಿ ಸರ್ಕಾರವಿರುವ ಸಮಯದಲ್ಲಿ ಪರೇಶ ಮೇಸ್ತ ಕೊಲೆ ಆರೋಪಿಯನ್ನೇ ವಕ್ಫ್ ಮಂಡಳಿಗೆ ನೇಮಿಸಿರುವುದು ಬಿಜೆಪಿ ಮುಖಂಡರು ಮುಜುಗರಪಡುವಂತಾಗಿತ್ತು. ಪರೇಶ ಮೇಸ್ತ ಹತ್ಯೆ ಹಾಗೂ ನಂತರ ನಡೆದ ಗಲಾಟೆಗಳಲ್ಲಿ ಬಿಜೆಪಿ ಕೈವಾಡವಿರುವುದು ಸಾಬೀತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.