

ವಿರಾಜಪೇಟೆ: ಆಹಾರ ಅರಸಿ ಅರಣ್ಯದಿಂದ ಹೊರಬಂದ ಒಂಟಿ ಸಲಗವೊಂದು ಭಾನುವಾರ ನಗರ ವ್ಯಾಪ್ತಿಯಲ್ಲಿ ಸಂಚರಿಸಿ ಕೆಲವು ಮನೆಗಳ ಆವರಣ ಗೋಡೆ, ಫಸಲು ನೀಡುವ ಗಿಡಗಳನ್ನು ಹಾನಿಗೊಳಿಸಿದೆ.
ವಿರಾಜಪೇಟೆ ನಗರದ ಮುಖ್ಯರಸ್ತೆ ತೆಲುಗರ ಬೀದಿಯಲ್ಲಿ ಮಧ್ಯರಾತ್ರಿಯಲ್ಲಿ ಕಾಣಿಸಿಕೊಂಡ ಕಾಡಾನೆಯೊಂದು ದಾಂಧಲೆ ನಡೆಸಿ ಮರಳಿ ಅರಣ್ಯಕ್ಕೆ ಸಾಗಿದೆ. ಭಾನುವಾರ ರಾತ್ರಿ 12.30ರಲ್ಲಿ ಕಾಡಾನೆಯೊಂದು ನೆಹರು ನಗರದ ಅರಣ್ಯ ಅಂಚಿನಿಂದ ನಗರದ ತೆಲುಗರ ಬೀದಿಯತ್ತ ಬಂದಿದೆ. ವಾಹನ ಚಾಲಕರು ಕಾಡಾನೆಯನ್ನು ಗಮನಿಸಿ ವಾಹನ ನಿಲುಗಡೆಗೊಳಿಸಿ ಹಿಂಬಾಲಿಸಿದಾರಲ್ಲದೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾಡಾನೆಯು ತೆಲುಗರ ಬೀದಿ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ಯಾಮ್ ಭಟ್ ಅವರ ಮನೆಯ ಆವರಣ ಗೋಡೆಯನ್ನು ಘಾಸಿಗೊಳಿಸಿ, ಪತ್ರಕರ್ತ ಕಿಶೋರ್‌ಕುಮಾರ್ ಶೆಟ್ಟಿ ಅವರ ಮನೆಯ ಹಿಂಬದಿಯಲ್ಲಿದ್ದ ಸ್ಥಳದಲ್ಲಿದ್ದ ಕಬ್ಬು ಮತ್ತು ಇತರ ಗಿಡಗಳನ್ನು ಹಾಳು ಮಾಡಿ, ಸಂಪತ್ ಜೈನ್ ಎಂಬುವರ ಮನೆ ತಂತಿ ಬೇಲಿಯನ್ನು ಮುರಿದಿದೆ.
ಕೂತಂಡ ಸಚಿನ್ ಅವರ ತೋಟದಲ್ಲಿ ಸಾಗಿದ ಕಾಡಾನೆಯು ಕಾಫಿ ಗಿಡಗಳನ್ನು ಹಾನಿ ಮಾಡಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸಿಡಿಮದ್ದು ಸಿಡಿಸಿದರು. ಸಿಡಿಮದ್ದಿನ ಶಬ್ದದಿಂದ ಕಾಡಾನೆ ಅರಣ್ಯದತ್ತ ಸಾಗಿತ್ತು.
ನಗರ ಠಾಣೆ ಸಿಬ್ಬಂದಿ, ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಶಿವರಾಂ ಮತ್ತು ಸಿಬ್ಬಂದಿ ಕಾಡಾನೆಯಿಂದ ಹೆಚ್ಚಿನ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದರು.