

ಬಾಗಲಕೋಟೆ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಮಾರ್ಗಸೂಚಿಯಂತೆ ಗ್ರಾಮ ಪಂಚಾಯಿತಿ ಮಟ್ಟದ ಪ್ರಮುಖ ಬೆಳೆಗಳು ಪ್ರತಿಕೂಲ ಹವಾಮಾನ ಪರಸ್ಥಿತಿಗಳಿಂದ ಅಧಿಸೂಚಿತ ಘಟಕಗಳಲ್ಲಿ ಶೇ.೭೫ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.೨೫ ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯವರು ನೀಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನಾವೃಷ್ಠಿ ಕಾರಣ ಬೆಳೆ ವಿಮೆ ಯೋಜನೆಯಡಿ ಬಿತ್ತನೆ ಅಡಚನೆ ಪರಿಹಾರ ಕುರಿತು ಜರುಗಿದ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಬಾಗಲಕೋಟೆ, ಹುನಗುಂದ ಹಾಗೂ ಇಳಕಲ್ಲ ತಾಲೂಕಿನಲ್ಲಿ ಮಳೆಯ ಅಭಾವ ಕಾರಣ ಮಳೆ ಆಶ್ರಿತ ಹೆಸರು ಬೆಳೆಯು ಶೇ.೭೫ ಕ್ಕಿಂತ ಕಡಿಮೆ ಬಿತ್ತನೆಯಾಗಿರುವುದಾಗಿ ವರದಿಯಾಗಿದೆ. ವಿಮಾ ಯೋಜನೆಯ ಮಾರ್ಗಸೂಚಿಯಂತೆ ಗ್ರಾಮ ಪಂಚಾಯಿತಿ ಮಟ್ಟದ ಪ್ರಮುಖ ಬೆಳೆಗಳು ಪ್ರತಿಕೂಲ ಹವಾಮಾನ ಪರಸ್ಥಿತಿಗಳಿಂದ ಅಧಿಸೂಚಿತ ಘಟಕಗಳಲ್ಲಿ ಶೇ.೭೫ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.೨೫ ರಷ್ಟು ಪರಿಹಾರವನ್ನು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದು ಪಡಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಮಟ್ಟದಲ್ಲಿ ಇಂದಿನಿಂದಲೇ ಕ್ರಮ ಜರುಗಿಸಿ ನಿಗಽತ ನಮೂನೆಯಲ್ಲಿ ಜು.೨೪ ರಂದು ಸಲ್ಲಿಸಲು ಸೂಚಿಸಿದರು. ಈ ಬಗ್ಗೆ ಹಾಜರಿದ್ದ ಬೆಳೆ ವಿಮೆ ಸಂಸ್ಥೆ ಪ್ರತಿನಿಧಿಗಳು, ಸಮಿತಿ ಸದಸ್ಯರುಗಳು ಹಾಗೂ ರೈತ ಪ್ರತಿನಿಧಿಗಳಿಗೆ ಹೇಳಿದಾಗ ಹಾಜರಿದ್ದ ಎಲ್ಲರೂ ಸಹಮತಿಯನ್ನು ವ್ಯಕ್ತಪಡಿಸಿದರು. ಹವಾಮಾನ ಆಧಾರಿತ ಬೆಳೆ ವಿಮೆಯ ಬಗ್ಗೆ ತೋಟಗಾರಿಕೆ ಇಲಾಖೆಯವರು ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಲ್.ಐ.ರೂಢಗಿ ಮಾತನಾಡಿ, ಮುಂಗಾರು ೨೦೨೩ರ ಬೆಳೆ ವಿಮೆ ಅಧಿಸೂಚನೆಯಂತೆ ಜಿಲ್ಲೆಯ ಹೆಸರು ಬೆಳೆಯ ಬೆಳೆ ವಿಮೆ ನೊಂದಾಯಿಸಲು ಕೊನೆಯ ದಿನ ಜು.೧೫ ಮುಗಿದಿದ್ದ್ದು, ಬಿತ್ತನೆ ಅಡಚನೆ ಪರಿಹಾರ ಮಾಡಲು ಕೊನೆಯ ದಿನ ಜು.೩೦ ಆಗಿದ್ದು, ಬಾಗಲಕೋಟೆ, ಹುನಗುಂದ ಹಾಗೂ ಇಳಕಲ್ಲ ತಾಲೂಕಿನವರು ನಿಗಽತ ನಮೂನೆಯಲ್ಲಿ ವರದಿಯನ್ನು ತಯಾರಿಸಿ ಜು.೨೪ ರೊಳಗಾಗಿ ಸಲ್ಲಿಸಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಜಮಖಂಡಿ ವಿಭಾಗದ ಕೃಷಿ ನಿರ್ದೇಶಕ ಕೆ.ಎಸ್.ಅಗಸಿನಾಳ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಕೃಷಿ ಸಹಾಯಕ ನಿರ್ದೇಶಕರಾದ ಪಾಂಡಪ್ಪ ಲಮಾಣಿ, ಮಂಜುನಾಥ ಮಾಳೆ ಉಪಸ್ಥಿತರಿದ್ದರು.