

ಬಾಗಲಕೋಟೆ: ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಗಳಾಚೆ ಬದುಕು ರೂಪಿಸಿಕೊಳ್ಳಲು ಸಾಹಿತ್ಯದ ಅಧ್ಯಯನ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಧರಣೇಂದ್ರ ಕುರಕುರಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕ ಘಟಕ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ವಿಶೇಷ ಕಾರ್ಯಕ್ರಮ ಅವೃತ್ತಿ ೨ ರಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶಗಳಲ್ಲಿ ಯುವ ಲೇಖಕರು, ವಿದ್ಯಾರ್ಥಿಗಳು ವಿಮರ್ಶೆಗಳಾಚೆ ಬದುಕು ರೂಪಿಸಿಕೊಳ್ಳುವ ಸಾಹಿತ್ಯದ ಅಧ್ಯಯನ ಮಾಡಬೇಕಿದೆ, ಸಾಹಿತಿಗಳು ಆ ನಿಟ್ಟಿನಲ್ಲಿ ಮುಂಬರುವ ಪೀಳಿಗಿಯ ಅಂತರವನ್ನು ಗಮನದಲ್ಲಿಟ್ಟುಕೊಂಡು ವಾಸ್ತವ ನೆಲಗಟ್ಟಿನಲ್ಲಿ ಸಾಹಿತ್ಯವು ಸಹೃದಯತೆಯಿಂದ ಜಗತ್ತನ್ನು ಗೆಲ್ಲಬೇಕಿದೆ ಎಂದರು.
ಸಾಹಿತ್ಯಾಸಕ್ತರು ಕಡಿಮೆಯಾಗುತ್ತಿರುವ ಈ ದಿನಮಾಮಾನದಲ್ಲಿ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಾವಿದ್ಯಾಲಯಗಳಲ್ಲಿ ಸಾಹಿತ್ಯ, ಸಾಂಸ್ಕೃತಿ ಕಾರ್ಯಕ್ರಮ, ಕವನ ಸ್ಪರ್ಧೆ, ಕೌಶಲ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ಪ್ರಾಚಾರ್ಯ ಪ್ರೊ.ಎಸ್.ಎನ್.ಪಟ್ಟಣಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೇಲ್ಲಿಕೇರಿ, ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ನಾಗೇಶ ಜೆ.ನಾಯಕ, ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ, ಸಂಚಾಲಕ ಪ್ರಕಾಶ ಡಂಗಿ, ಡಾ.ಪ್ರಕಾಶ ಖಾಡೆ, ತಾಲೂಕ ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಉಪಸ್ಥಿತರಿದ್ದರು.