

ಭಟ್ಕಳ: ಭಟ್ಕಳವನ್ನು ಕಂಟೈನ್ಮೇಂಟ್ ಜೋನ್ನಿಂದ ಸಡಿಲಿಸಿ ಸಾರ್ವಜನಿಕರಿಗೆ ಬೆಳಗ್ಗೆ 8ರಿಂದ 2ರವರೆಗೆ ವಿನಾಯಿತಿ ನೀಡಲಾಗಿದೆ. ಆದರೆ, ಇದರ ದುರುಪಯೋಗವಾಗದಂತೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.
ಶುಕ್ರವಾರ ಭಟ್ಕಳಕ್ಕೆ ಆಗಮಿಸಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಈಗ ಅಂತರ ಜಿಲ್ಲೆಯಿಂದ ಬರುವವರಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಸ್ಥಳೀಯರು, ನೋಡಲ್ ಅಧಿಕಾರಿಗಳು, ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ನಿಗಾ ಇಡಬೇಕು. ಸಂಶಯ ಬಂದಲ್ಲಿ ಆಡಳಿತಕ್ಕೆ ತಿಳಿಸಬೇಕು ಇದರಿಂದ ನಮ್ಮವರ ಸ್ವಾಸ್ಥ್ಯವನ್ನು ರಕ್ಷಿಸಿದಂತಾಗುತ್ತದೆ. ಅಂತರ ರಾಜ್ಯಗಳಿಂದ ಬಂದವರ ಮೇಲೆ ನಿಗಾ ಇಡುವ ತಂಡವನ್ನು ಈಗಾಗಲೆ ರಚಿಸಲಾಗಿದೆ ಎಂದರು.
ಸಮಯ ಮಿತಿ ನಿಗದಿಪಡಿಸಿರುವುದರಿಂದ ಕಟ್ಟಡ ಕಾಮಗಾರಿ ನಡೆಸುವವರಿಗೆ, ಸ್ಲ್ಯಾಬ್ ಹಾಕುವವರಿಗೆ ತೊಂದರೆಯಾಗಬಹುದು. ಅಂಥವರು ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಲ್ಲಿ ಅವರಿಗೆ ಸ್ವಲ್ಪ ಹೆಚ್ಚಿನ ಸಮಯ ನೀಡಬಹುದು ಎಂದರು.
ಮದುವೆ ಮಾಡುವವರು 50ಕ್ಕಿಂತ ಹೆಚ್ಚು ಜನರು ಸೇರದಂತೆ ಜಾಗೃತಿ ವಹಿಸಬೇಕು. ಒಂದು ವೇಳೆ 51 ಜನ ಸೇರಿದರು ನಾನೇ ಬಂದು ತಾಳಿ ಕೊಂಡೊಯ್ಯುತ್ತೇನೆ ಎಂದು ನಗೆಚಟಾಕೆ ಹಾರಿಸಿದರು. ಆ ಮೇಲೆ ಅವರಿಗೆ ತಾಲೂಕಾಡಳಿವೆ ಉತ್ತರಿಸುತ್ತದೆ ಎಂದರು.
ಶಾಸಕ ಸುನೀಲ ನಾಯ್ಕ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಸಹಕರಿಸಬೇಕು. ನಿಯಮಗಳು ಪಾಲನೆಯಾಗುವಂತೆ ಮನವೊಲಿಸಿ. ಎಸಿ ಕಚೇರಿಯಲ್ಲಿ ಮುಖಂಡರ ಸಭೆ ನಡೆಸುವುದಾದರೆ ಉಭಯ ಕೋಮಿನ ಸಂಬಂಧ ಪಟ್ಟ ಎಲ್ಲರನ್ನು ಕರೆದು ರ್ಚಚಿಸಿ. ಇದನ್ನು ಕೇವಲ 2-3 ಜನರಿಗೆ ಸೀಮಿತ ಮಾಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಉಪವಿಭಾಗಾಧಿಕಾರಿ ಭರತ್ ಸೆಲ್ವಂ, ಎಎಸ್ಪಿ ನಿಖಿಲ್ ಬಿ, ತಹಸೀಲ್ದಾರ್ ಎಸ್ ರವಿಚಂದ್ರನ್, ತಾ.ಪಂ. ಇಒ ಪ್ರಭಾಕರ ಚಿಕ್ಕನಮನೆ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಎಸಿ ಕಚೇರಿಯ ರಾಜು ನಾಯ್ಕ ಸೇರಿ ಇತರರು ಇದ್ದರು.