ವಿನಾಕಾರಣ ಸುಳ್ಳು ಆರೋಪ

Medhavini S Katti (GUG)
Published on

ಕಲಬುರಗಿ: ಬಿ.ಇಡಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಎನ್‌ಎಸ್‌ಯುಐ ಸಂಘಟನೆಯವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಗುಲ್ಬರ್ಗ ವಿವಿ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ ಸ್ಪಷ್ಟಪಡಿಸಿದ್ದಾರೆ.
ಬಿ.ಇಡಿ ಪರೀಕ್ಷೆಗಳು ಜು.೧ರಂದು ಆರಂಭವಾಗಿ ಜು.೭ರಂದು ಮುಕ್ತಾಯವಾಗಿವೆ. ಯಾವುದೇ ಸಮಸ್ಯೆ ಆಗಿಲ್ಲ. ಪರೀಕ್ಷಾ ಕೇಂದ್ರಗಳ ಪಟ್ಟಿ ವಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೋರ್ಟ್ ಆದೇಶದಂತೆ ಇಂದಿರಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ೧೦೦ ವಿದ್ಯಾರ್ಥಿಗಳಲ್ಲಿ ೨೨ ಅರ್ಹರಿಗೆ ಪರೀಕ್ಷೆಗೆ ಅನುಮತಿ ನೀಡಲಾಗಿತ್ತು. ಪರೀಕ್ಷೆ ಪ್ರಾರಂಭದ ಒಂದು ದಿನ ಮುಂಚೆ ಮಾಹಿತಿ ಲಭ್ಯವಾದ್ದರಿಂದ ಹೆಚ್ಚುವರಿ ವಿದ್ಯಾರ್ಥಿಗಳನ್ನು ಅಲ್ ಬದರ್ ಕಾಲೇಜಿನಲ್ಲಿ ಪರೀಕ್ಷೆಗೆ ಸೂಚಿಸಿ, ಪತ್ರ ರವಾನಿಸಲಾಗಿತ್ತು.
ಇಂದಿರಾ ಗಾಂಧಿ ಕಾಲೇಜಿನ ರೆಗ್ಯುಲರ್ ವಿದ್ಯಾರ್ಥಿಗಳನ್ನು ಎನ್‌ವಿ ಪರೀಕ್ಷಾ ಕೇಂದ್ರದಲ್ಲಿ ಜೋಡಿಸಿದ್ದು, ನ್ಯಾಯಾಲಯದಿಂದ ನಿರ್ದೇಶಿತ ಹೆಚ್ಚುವರಿ ವಿದ್ಯಾರ್ಥಿಗಳನ್ನು ಅಲ್ ಬದರ್ ಕಾಲೇಜಿನಲ್ಲಿ ಪರೀಕ್ಷೆಗೆ ಅನುಮತಿಸಲಾಗಿತ್ತು ಎಂದು ಮೇಧಾವಿನಿ ಕಟ್ಟಿ ತಿಳಿಸಿದ್ದಾರೆ.
ಆದರೆ ಇಂದಿರಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ನ್ಯಾಯಾಲಯ ನಿರ್ದೇಶಿತ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸುಳ್ಳು ಪತ್ರ, ವಿವಿ ಪರೀಕ್ಷಾ ವಿಭಾಗದ ನಕಲಿ ಸೀಲ್ ಬಳಸಿ ತಮ್ಮ ಕಾಲೇಜಿನ ೧೦೦ ವಿದ್ಯಾರ್ಥಿಗಳ ನಕಲಿ ಪಟ್ಟಿ ತಯಾರಿಸಿ, ಅಲ್ ಬದರ್ ಕಾಲೇಜಿಗೆ ಸಲ್ಲಿಸಿ, ಪರೀಕ್ಷೆ ಬರೆಸಿದ್ದಾರೆ. ಮೊದಲ ಎರಡು ದಿನ ಪರೀಕ್ಷೆ ಬರೆದಿದ್ದು, ನಂತರ ಅದಕ್ಕೆ ತಡೆ ನೀಡಲಾಗಿದೆ. ಈ ಕುರಿತು ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net