ವಿನಾಕಾರಣ ರಸ್ತೆಗಿಳಿದವರನ್ನುಮನೆಗೆ ಕಳುಹಿಸಿದ ಪೊಲೀಸರು

22sursi2b
Published on

ವಿಜಯವಾಣಿ ಸುದ್ದಿಜಾಲ ಶಿರಸಿ: ನಗರದಲ್ಲಿ ಜನತಾ ಕರ್ಫ್ಯೂಗೆ ಸಾರ್ವಜನಿಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ನಗರದ ಪ್ರಮುಖ ಸ್ಥಳಗಳಾದ ಹಳೇ ಬಸ್ ನಿಲ್ದಾಣ, ಬಿಡ್ಕಿಬಯಲು, ದೇವಿಕೆರೆ, ಅಶ್ವಿನಿ ಸರ್ಕಲ್, ರಾಘವೇಂದ್ರ ಸರ್ಕಲ್, ಕೋಟೆಕೆರೆ, ಎಪಿಎಂಸಿ ಭಾಗದಲ್ಲಿ ಜನ ಜಂಗುಳಿ ಇಲ್ಲದೆ ಬಿಕೋ ಅನ್ನುತ್ತಿತ್ತು. ದಿನವಿಡೀ ಜನಜಂಗುಳಿ ತುಂಬಿರುತ್ತಿದ್ದ ಹಳೇ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಅನ್ನುತ್ತಿತ್ತು. ಕೆಲವು ಔಷಧ ಮಳಿಗೆಗಳು ಅರ್ಧ ಬಾಗಿಲು ತೆರೆದು ಅಗತ್ಯ ಔಷಧ ಪೂರೈಸಿದವು. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಸಾರ್ವಜನಿಕರು ವಿನಾಕಾರಣ ರಸ್ತೆಗಿಳಿದವರನ್ನು ವಾಪಸ್ ಮನೆಗೆ ಕಳುಹಿಸಿದರು. ಅನಗತ್ಯವಾಗಿ ಬೈಕ್ ಮೇಲೆ ಸಂಚರಿಸುತ್ತಿದ್ದ ಪುಂಡ ಯುವಕರಿಗೆ ಪೊಲೀಸರು ಲಾಠಿಯ ರುಚಿ ತೋರಿಸಿ ಮನೆಯ ದಾರಿ ತೋರಿಸಿದರು.

ಪ್ರಯಾಣಿಕರ ಫಜೀತಿ: ಬೆಂಗಳೂರಿನಿಂದ 8.15ರ ಸುಮಾರಿಗೆ ನಗರದ ಕಡೆ ಬರುತ್ತಿದ್ದ ಬಸ್ಸನ್ನು ಇಲ್ಲಿನ ಚಿಪಗಿ ಸರ್ಕಲ್​ನಲ್ಲಿ ಪೊಲೀಸರು ತಡೆದರು. ಬಸ್ ಚಾಲಕ ಪ್ರಯಾಣಿಕರನ್ನು ಅಲ್ಲಿಯೇ ಬಿಟ್ಟು ವಾಪಸ್ಸಾದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು. ವಾಪಸ್ ಹೋಗಿದ್ದ ಬಸ್ ಅನ್ನು ಪುನಃ ಕರೆಯಿಸಲಾಯಿತು. ಅಷ್ಟರಲ್ಲಿ ಕೆಲವು ಪ್ರಯಾಣಿಕರನ್ನು ಸಂಬಂಧಿಗಳು ಬಂದು ವಾಹನದಲ್ಲಿ ಕರೆದುಕೊಂಡು ಹೋದರು. ಪ್ರಯಾಣಿಕರು ಬೆಂಗಳೂರಿನಿಂದ ಬಂದಿರುವ ಕಾರಣ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮನೆಗೆ ಹೋಗಬೇಕು ಎಂದು ಡಿವೈಎಸ್ಪಿ ಜಿ.ಟಿ. ನಾಯಕ ಸೂಚಿಸಿದರು. ನಂತರ ಉಳಿದ ಪ್ರಯಾಣಿಕರು ಅದೇ ಬಸ್​ನಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net