ವಿಧಾನ ಸೌಧದಲ್ಲಿ ಬೌದ್ಧಿಕ ದಾರಿದ್ರೆವಿದೆ

bkt-5-3
ಬಾಗಲಕೋಟೆ ನಗರದ ಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೀಡೆಕರೆ ಜಮೀನು ಕಥಾ ಸಂಕಲನದ ಪುಸ್ತಕ ಬಿಡುಗಡೆಯಾಯಿತು.
Published on

ಬಾಗಲಕೋಟೆ: ಇಂದು ಭಾರತ ಅರ್ಥ ಮಾಡಿಕೊಳ್ಳದಿದ್ದರೇ, ಪರಿಸ್ಥಿತಿ ಪರ ವಕಾಲತ್ತು ವಹಿಸಿದಿದ್ದರೇ ನಾವು ಸಮಾಜಕ್ಕೆ ಮಾಡುವ ದ್ರೋಹವಾಗಿದೆ ಎಂದು ಸಾಹಿತಿ ಡಾ.ಕುಂ.ವೀರಭದ್ರಪ್ಪ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಯಂಡಿಗೇರಿಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಕಾಚಕ್ಕಿ ಪ್ರಕಾಶನ ಮತ್ತು ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಟಿಡಿಎ ಮುಖ್ಯ ಲೆಕ್ಕಾಧಿಕಾರಿ ಮಲ್ಲಿ ಕಾರ್ಜುನ ಶೆಲ್ಲಿಕೇರಿ ಅವರ ದೀಡೆಕರೆ ಜಮೀನು ಕಥಾ ಸಂಕಲನದ ಪುಸ್ತಕ ಬಿಡುಗಡೆ ಸಮಾರಂಭವದಲ್ಲಿ ಅವರು ಮಾತನಾಡಿದರು.
ರಾಜಕಾರಣಿಗಳು ಓದಬೇಕು. ಎಷ್ಟು ಓದುತ್ತಾರೆ ಅಷ್ಟು ಸಮಾಜ ಅರ್ಥವಾಗುತ್ತದೆ. ವಿಧಾನ ಸೌಧದಲ್ಲಿರುವ ಶಾಸಕರು ಅಕ್ಷರ ಕಲಿತ ಅನಕ್ಷಃರಸ್ಥರಾಗಿದ್ದಾರೆ. ಶೇ.೬೦ ಶಾಸಕರಿಗೆ ಸಾಹಿತ್ಯವೇ ಗೊತ್ತಿಲ್ಲ. ಓದಿಲ್ಲ. ಹೀಗಾಗಿ ಸಮಾಜ, ದೇಶ ಅರ್ಥವಾಗುವದಿಲ್ಲ. ಮಾಜಿ ಸಿಎಂ ಜೆ.ಎಚ್.ಪಟೇಲ ಸಾಹಿತ್ಯ ಪ್ರಿಯರಾಗಿದ್ದರು. ತಮ್ಮ ವಿರೋಧಿಗಳಿಗೂ ಅದರ ಮೂಲಕ ಉತ್ತರ ನೀಡುತ್ತಿದ್ದರು. ಅವರ ಕಡೆಯಿಂದ ಬೈಯಿಸಿಕೊಳ್ಳಲು ಎಷ್ಟು ಜನ ಕಾತುರದಿಂದ ಕಾಯುತ್ತಿದ್ದರು. ಗ್ರಂಥಾಲಯದಿಂದ ಜನಪ್ರತಿನಿಧಿಗಳ ಪುಸ್ತಕ ಖರೀದಿಸಿದ ಬಗ್ಗೆ ಸರ್ವೇ ಮಾಡಿಸಲಾಯಿತು. ವೈಚಾರಿಕತೆಗ್ಗಿಂತ ವಾಮಾಚಾರದ ಪುಸ್ತಕಗಳ ಖರೀದಿಯೇ ಹೆಚ್ಚಾಗಿತ್ತು. ಹೀಗಾಗಿ ವಿಧಾನ ಸೌಧದಲ್ಲಿ ಬೌದ್ಧಿಕ ದಾರಿದ್ರ‍್ಯವಿದೆ ಎಂದು ಮಾರ್ಮಿಕವಾಗಿ ನುಡಿದರು.
ಕೃತಿ ನಮ್ಮಲ್ಲಿ ಅಂಧಾದೀವಿಗೆ ಬೆಳಗುತ್ತದೆ. ಬೆಂದ ಓದಿದರೆ ನಮ್ಮಲ್ಲಿ ಬೇಂದ್ರೆ ಇರ್ತಾರೆ, ಕುವೆಂಪು ಇರ್ತಾರೆ. ನಮ್ಮ ಅಂತ ರಂಗದಲ್ಲಿ ಕೃತಿಕಾರರು ನೆಲೆಸಬೇಕು. ಇಲ್ಲಿನ ಮಣ್ಣಿನ ಗುಣಕ್ಕೆ ಪ್ರತಿಯೊಂದಕ್ಕೂ ಮೆರಗು ನೀಡುವ ಶಕ್ತಿ ಇದೆ. ಹೀಗಾಗಿ ಬಸವಣ್ಣ ಕ್ರಾಂತಿಕಾರಿಯಾದರು. ಕೃಷ್ಣೆ ತುಂಗೆ ನಡುವಿನ ಜಾಗದಲ್ಲಿ ಶಕ್ತಿಯಿದೆ. ಆಲಮಟ್ಟಿ ಹಿನ್ನೀರು ಸೊಳ್ಳೆಗಳ ಹುಟ್ಟುವಳಿ ಸ್ಥಳ. ಮೃತ್ಯುಂಜಯರಂತೆ ಇಲ್ಲಿನ ಜನ ಹಿನ್ನೀರಿನಲ್ಲಿ ಬದುಕುತ್ತಿದ್ದಾರೆ. ಕೆಎಎಸ್ ಅಧಿಕಾರಿಯಾಗಿದ್ದರು ಮಲ್ಲಿಕಾರ್ಜುನ ಶೆಲ್ಲಿಕೇರಿ ಕೃತಿ ರಚನೆ ಮಾಡಿದ್ದಾರೆ. ನಮ್ಮ ಅಧಿಕಾರಿಗಳಿಗೆ ಸರ್ಕಾರ ಸಾಹಿತ್ಯದ ಕಾರ್ಯಾಗಾರ ಏರ್ಪಡಿಸಬೇಕು. ಅಂದಾಗ ಜನರ ನೋವು, ನಲಿವು ಅರ್ಥವಾಗುತ್ತದೆ ಎಂದರು.
ಸಾಮಾನ್ಯರು ಲೇಖಕರಾಗಬಹುದು. ಬೇಂದ್ರ, ಕುವೆಂಪು, ಬಸವಣ್ಣ, ಶರಣರ ವಚನ, ಕುಮಾರ ವ್ಯಾಸ, ರನ್ನನ ಕೃತಿ, ಸಾಹಿತ್ಯ ಎಲ್ಲವು ಓದಬೇಕು. ಓದಿದಷ್ಟು ಬರವಣೆಗೆ ಚಂದ ಆಗುತ್ತದೆ. ದಿನಕ್ಕೆ ಒಂದು ಪುಟ ಬರೆದರೆ ನಿಮಗೆ ಮೆಡಿಟೇಶನ, ರವಿ ಶಂಕರ ಗುರೂಜಿ ಯಾರೂ ಬೇಕಾಗಿಲ್ಲ. ರಾಘವೇಂದ್ರ ಖಾಸನೀಸ್ ಅವರು ಕನ್ನಡದ ಅತ್ಯಂತ ಶ್ರೇಷ್ಠ ಕಥೆಗಾರ. ಅವರು ಬರೆದಿರೋದು ಒಂದೇ ಕಥೆ. ನಾವು ಬೆಳೆದಂತೆ ನಮ್ಮೊಳಗಿನ ಕಥೆಯೂ ಬೆಳೆಯುತ್ತಿರಬೇಕು. ಕಲ್ಪನಾ ಶಕ್ತಿ ಬಲಗೊಂಡಾಗ ಉತ್ತಮ ಲೇಖನಗಳು ಮೂಡಿಬರುತ್ತವೆ ಎಂದು ಹೇಳಿದರು. ಸಾಹಿತ್ಯ ವಿಲ್ಲದ ರಾಜಕಾರಣ, ವ್ಯವಸ್ಥೆ ಇಲ್ಲ. ಸಾಹಿತ್ಯ, ಸಮಾಜ ಒಂದಕ್ಕೊಂದು ಸಂಬಂಧವಿದೆ. ಸಾಹಿತ್ಯ ನಮ್ಮನ್ನು ಮನುಷ್ಯರನ್ನಾಗಿಸುತ್ತೆ. ಅತ್ಯುತ್ತಮ ಪ್ರಜೆಗಳನ್ನಾಗಿ ರೂಪಿಸುತ್ತವೆ. ನನ್ನ ಸುಪಾರಿ ಕೃತಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ ಎಂದ ಅವರು, ನನ್ನ ಜಿಲ್ಲೆ ಬಳ್ಳಾರಿ ಮುಠ್ಠಾರಿಗೆ ಹೆಸರಾಗಿದೆ. ಈಚೆಗೆ ಹೊಸ ಪಕ್ಷ ಕಟ್ಟಿದ ಮುಠ್ಠಾಳ ೫೬ ಕೋಟಿ ರೂ. ಮೊತ್ತದ ಚಿನ್ನ, ವಜ್ಜರದ ಕಿರೀಟ ವೆಂಕಪ್ಪನಿಗೆ ಕೊಟ್ಟು ೬ ದಿನಕ್ಕೆ ಜೈಲಿಗೆ ಹೋಗಿದ್ದ. ಇಂತಹ ಮುಠ್ಠಾಳ ರಾಜಕಾರಣಿಗಳಿರುವ ದೇಶ ನಮ್ಮದು. ಇಂಥದರ ಬಗ್ಗೆ ಕಥೆ ಬರೆಯಬೇಕು ಎಂದು ಮೊನಚಾದ ಭಾಷೆಯಲ್ಲಿ ಚುಚ್ಚಿದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಹಲವು ಕೌಟುಂಬಿಕ ಸಮಸ್ಯೆಗಳ ನಡುವೆಯೂ ಬಿಟಿಡಿಎ ಮುಖ್ಯಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಕೃತಿ ರಚನೆ ಮಾಡಿದ್ದಾರೆ. ವಿನೋಭಾ ಭಾವೆಯಿಂದ ಪ್ರಭಾವಿತರಾದವು. ನಾನು ನಿರಂತರವಾಗಿ ಓದಿನಲ್ಲಿ ತೊಡಗಿರುತ್ತೇನೆ. ಚುನಾವಣೆ ಸಮೀಪ ಇರುವ ಕಾರಣಕ್ಕೆ ಓದಲು ಆಗುತ್ತಿಲ್ಲ. ನಮ್ಮ ಈ ನೆಲ ಸಾಹಿತ್ಯ, ಜನಪದ ತವರೂರು. ಹೊಸ ಲೇಖಕರು ಬರಬೇಕು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಪತ್ರಕರ್ತೆ ರೆಶ್ಮಿ ಎಸ್., ಸಿದ್ದರಾಮ ಮನಹಳ್ಳಿ, ಎಸ್.ಬಿ.ಶೆಲ್ಲಿಕೇರಿ, ಕವಿ ಚೇತನ ನಾಗರಾಳ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net