ವಿದ್ಯೇಯ ಜೊತೆಗೆ ಸಂಸ್ಕಾರದ ಪಾಠವು ಮುಖ್ಯ

bkt-5-2
Published on

ಬಾಗಲಕೋಟೆ: ಮಕ್ಕಳ ತಲೆಯಲ್ಲಿ ಕೇವಲ ವಿಷಯಗಳನ್ನು ತುಂಬದೇ ಅದರ ಜೊತೆಗೆ ಈ ದೇಶದ ಪರಂಪರೆ, ಸಂಸ್ಕøತಿಯ ಪಾಠ ಕಲಿಸುವುದು ಮುಖ್ಯವಾಗಿದೆ ಎಂದು ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನವನಗರದ ಕಲಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜಕ್ಕೆ ಏನಾದರೂ ಭವಿಷ್ಯವಿದೆ ಎಂದರೆ ಶಿಕ್ಷಣದಿಂದ ಸಾಧ್ಯ. ಆ ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯವಾಗಿದೆ ಎಂದರು.
ಜೀವನದಲ್ಲಿ ತಮ್ಮ ಕಾಲ ಮೇಲೆ ನಿಲ್ಲಬೇಕಾದಲ್ಲಿ ಶಿಕ್ಷಣ ಬೇಕು. ಆದರೆ ಇದರ ಜೊತೆಗೆ ಸಂಸ್ಕಾರವನ್ನು ಕಲಿಸಿಕೊಡಬೇಕು. ಹಿಂದೆ ಶಿಕ್ಷಕರೆಂದರೆ ಬಹಳಷ್ಟು ಗೌರವ, ಭಕ್ತಿಭಾವನೆ ಇತ್ತು. ಶಾಲೆಯಲ್ಲಿ ಕಲಿತಂತ ಶಿಕ್ಷಣ ಕೊನೆಯವರೆಗೂ ಇರುತ್ತಿತ್ತು. ಶಿಕ್ಷಕರು ಒಳ್ಳೆಯದನ್ನು ಕಲಿಸಿದ್ದು, ಇವತ್ತಿಗೂ ಬರುತ್ತದೆ. ಶಾಲೆಗೆ ದಾಖಲಾತಿಗಾಗಿ ಮಾಡಿಕೊಳ್ಳಲು ಹೋದರೆ ಮಗು ಎಷ್ಟು ಅಂಕ ಪಡೆದಿದೆ. ಇದರ ಜೊತೆಗೆ ತಂದೆ-ತಾಯಿ ಸಂದರ್ಶನ ಮಾಡುವ ಸ್ಥಿತಿ ಒದಗಿಬಂದಿದೆ. ಈ ಪದ್ದತಿ ನಿಲ್ಲಬೇಕು. ಸರಕಾರಿ ಶಾಲೆಯಲ್ಲಿಯೇ ಓದಬೇಕು. ನಾವೆಲ್ಲರೂ ಸರಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನ ಪಡೆದುಕೊಂಡಿರುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾ ಮಾತನಾಡಿ ಮತ್ತೊಬ್ಬರ ಭವಿಷ್ಯಕ್ಕಾಗಿ ದುಡಿಯುವ ವ್ಯಕ್ತಿತ್ವ ಪ್ರವೃತ್ತಿಯಿಂದ ಬರುವಂತಹದ್ದು. ಹಿಂದಿನ ಕಾಲದಲ್ಲಿ ಜೀವನಕ್ಕೆ ಬೇಕಾಗುವಷ್ಟು ಶಿಕ್ಷಣ ಪಡೆಯಬೇಕೆಂಬುವದಾಗಿತ್ತು. ನಾಡ, ದೇಶ ಕಟ್ಟುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಇಂದು ಸಂಸ್ಕಾರಯುತ ಶಿಕ್ಷಣ ಅವಶ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ತಾವು ಪಡೆದ ಶಿಕ್ಷಣ ನೀತಿ, ಈ ಹಿಂದೆ ಇರುವ ಶಿಕ್ಷಣ ನೀತಿಗೆ ಬಹಳ ವ್ಯತ್ಯಾಸವಿದ್ದು, ಇಂದಿನ ವಿದ್ಯಾರ್ಥಿಗಳ ಪಠ್ಯಕ್ಕೆ ಉತ್ತರ ನೀಡುವಷ್ಟು ತಿಳುವಳಿಕೆ ನಮಗಿಲ್ಲವಂತಾಗಿದೆ. ಅಷ್ಟೊಂದು ಶಿಕ್ಷಣ ಕ್ಷೇತ್ರ ಬೆಳೆದಿದೆ ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಒಂದು ತಲೆಮಾರು ರೂಪಿಸುವ ವೃತ್ತಿ ಶಿಕ್ಷಕವೃತ್ತಿಯಾಗಿದ್ದು, ಪ್ರತಿಯೊಬ್ಬ ಸಾಧಕರ ಹಿಂದೆ ಒಬ್ಬ ಗುರು, ಮಾರ್ಗದರ್ಶಿ ಇದ್ದೇ ಇರುತ್ತಾರೆ. ಗುರುವಿನ ನೆರವು ಇಲ್ಲದೇ ಸಾಧನೆ ಸಾಧ್ಯವಿಲ್ಲ. ವಿದ್ಯೆ ಬದುಕಿನ ಪಾಠ ಕಲಿಸುತ್ತದೆ. ಇಂತಹ ಆದರ್ಶ ಪ್ರವೃತ್ತಿ ಮುಂದುವರಿಯಬೇಕಿದೆ ಎಂದರು. ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ 26ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಬಂದಿದೆ. ಶಿಕ್ಷಕರಿಗೆ ಗೌರವ, ಮೌಲ್ಯ ಕೊಡುವ ಕೆಲಸವಾಗಬೇಕು ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳುವುದು ಸಾವಿತ್ರಿಬಾಯಿ ಪುಲೆ ಹಾಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾದ ಸಾವಿತ್ರಿಬಾಯಿ ಪುಲೆ ಅವರು ಸ್ತ್ರೀ ಸಂಕುಲಕ್ಕೆ ರಹದಾರಿ ತೋರಿದವರು. ಸಾಮಾಜಿಕವಾಗಿ ನಿರ್ಮಿಸಲಾದ ತಾರತಮ್ಯದ ಆಚರಣೆಗಳ ಸಂಕೋಲೆಗಳಿಂದ ಮುಕ್ತರಾಗಲು ಶಿಕ್ಷಣವನ್ನು ಪಡೆಯುವಂತೆ ಪ್ರೇರೇಪಿಸದರು. ಸರ್ವಪಲ್ಲಿ ರಾಧಾಕೃಷ್ಣನ್ ಈ ದೇಶ ಕಂಡ ಒಬ್ಬ ಮಹಾನ್ ತತ್ವಜ್ಞಾನಿ ಮತ್ತು ರಾಜಕಾರಣಿ ಹಾಗೂ ಭಾರತ ರತ್ನ ಪ್ರಶಸ್ತಿಗೆ ಪಾತ್ರರಾದವರು. ಶಿಕ್ಷಣ ನೀಡುವ ಅಡಿಪಾಯ ಭದ್ರಗೊಳಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಶಾಲಾ ಶಿಕ್ಷಣ‌‌ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಡಿವಾಯ್.ಪಿ.ಸಿ ಉಪ ಸಮನ್ವಯಾಧಿಕಾರಿ ಸಿ.ಆರ್.ಓಣಿ ಸೇರಿದಂತೆ ಶಿಕ್ಷಕ‌ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net