

ಚನ್ನರಾಯಪಟ್ಟಣ: ಆಧುನಿಕ ದಿನಗಳಲ್ಲಿ ವಿದ್ಯೆಯ ಜತೆಗೆ ಕೌಶಲವೂ ಮುಖ್ಯವಾದುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಸಮೂಹ ವಿದ್ಯಾಸಂಸ್ಥೆಗಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ ಮತ್ತು ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ವಿದ್ಯಾರ್ಥಿಗಳು ಪದವಿ ಪಡೆದ ಬಳಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಕ್ಕೆ ಸೇರಬೇಕಾದರೆ ಕೌಶಲವನ್ನು ರೂಢಿಸಿಕೊಳ್ಳಬೇಕು. ಅದರಲ್ಲೂ ಸಂಪರ್ಕ ಕೌಶಲ ಇರಬೇಕು. ಕೌಶಲ ರೂಢಿಸಿಕೊಳ್ಳುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಅನಗತ್ಯ ಚಟುವಟಿಕೆಗೆ ಕಡಿವಾಣ ಹಾಕಬೇಕು. ಯಾವುದೇ ಕ್ಷೇತ್ರದಲ್ಲಿ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ಸಾಧನೆ ಮಾಡಿ ಉನ್ನತಿ ಸಾಧಿಸಬೇಕು. ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತದೆ, ಇದು ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಡುತ್ತದೆ ಎಂದರು.
ಮೈಸೂರು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಪಿ.ಎನ್.ಹೇಮಚಂದ್ರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕು. ಭಾರತದಲ್ಲಿ ಯಾವುದೇ ನಿರುದ್ಯೋಗದ ಸಮಸ್ಯೆಇಲ್ಲ. ಅದರೆ ಉದ್ಯೋಗಕ್ಕೆ ಬೇಕಾದ ಕೌಶಲದ ಕೊರತೆ ಇದೆ. ಈ ನಿಟ್ಟಿನಲ್ಲಿ ಕೌಶಲ ಮಹತ್ವದ ಪಾತ್ರ ವಹಿಸುತ್ತದೆ. ಸಮಯ ಮುಖ್ಯವಾದುದು. ಅದನ್ನು ಸದುಪಯೋಗಪಡಿಸಿಕೊಂಡು ಉನ್ನತವಾದುದನ್ನು ಸಾಧಿಸುವ ಛಲ ಇರಿಸಿಕೊಂಡು ಸಾಗಿದರೆ ಗುರಿ ಮುಟ್ಟಬಹುದು. ಸಾಧನೆ ಮಾಡಲು ಕೀಳರಿಮೆ ಅಡ್ಡಿ ಬರಬಾರದು, ಕುಂಟು ನೆಪ ಹೇಳಬಾರದು. ಸಾಧನೆ ಮಾಡುವ ಸ್ಪಷ್ಟ ನಿಲುವು ವಿದ್ಯಾರ್ಥಿಗಳಿಗಿರಬೇಕು ಎಂದರು.
ಮೊಬೈಲ್ ನಮ್ಮ ಸಾಧನೆಗೆ ಪೂರಕವಾಗುವಂತೆ ಮಾತ್ರ ಅದನ್ನು ಉಪಯೋಗಿಸಿ ಕೊಳ್ಳಬೇಕು. ನಂಬಿಕೆ, ಅತ್ಮವಿಶ್ವಾಸ, ಧೈರ್ಯ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆ ಜೀವನಕ್ಕೆ ಸೋಪಾನ. ಸೂಕ್ತ ಸಿದ್ಧತೆ ಮಾಡಿಕೊಂಡು ಪರೀಕ್ಷೆ ಬರೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ವಿದ್ಯಾರ್ಥಿಗಳಿಗೆ ಮನದಟ್ಟಾಗಬೇಕು ಎಂದು ತಿಳಿಸಿದರು.
ಆದಿಚುಂಚನಗಿರಿ ಶಂಭುನಾಥ ಶಾಖಾ ಮಠಾಧೀಶ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳಿಗೆ ಗುರುಗಳ ಮಾರ್ಗ ದರ್ಶನ ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ದೊರಕಬೇಕಾದರೆ ದಿನ ಪತ್ರಿಕೆಗಳನ್ನು ಓದಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗಿರಿವೈಭವ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು.
ಪ್ರಾಂಶುಪಾಲ ಎಂ.ಕೆ.ಮಂಜುನಾಥ, ಸಹಾಯಕ ಪ್ರಾಧಾಪಕರಾದ ಎನ್.ಟಿ. ನಾಗರಾಜ, ಎಂ.ಆರ್.ನಿರೂಪಾ, ಎಸ್.ಸಿ.ನಂದೀಶ್, ಬಿ.ಜಿ.ಎಸ್.ಪಿಯು ಕಾಲೇಜು ಪ್ರಾಂಶುಪಾಲ ಸಿ.ಸಿ.ಕುಮಾರ್ ಹಾಜರಿದ್ದರು.