

ಮೂಡುಬಿದಿರೆ: ಉಡುಪಿ-ಕಾಸರಗೋಡು ನಡುವೆ ಹಾದು ಹೋಗುವ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ಸಂಬಂಧಪಟ್ಟಂತೆ, ಸ್ಟೆರ್‌ಲೈಟ್ ಕಂಪನಿಯವರು ಯಾವುದೇ ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೆ ತೆಂಕಮಿಜಾರು ಗ್ರಾಮದ ಅಶ್ವತ್ಥಪುರ ಬಳಿಯ ಓಂಟೆಮಾರ್ ಪ್ರದೇಶದ ಕೃಷಿ ಭೂಮಿ ನಾಶಪಡಿಸಿದ್ದು, ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕ್ರಮ ಖಂಡಿಸಿ, ಗ್ರಾಮಸ್ಥರು ಹಾಗೂ ಭಾರತೀಯ ಕಿಸಾನ್ ಸಂಘದ ಸದಸ್ಯರು ಜಂಟಿಯಾಗಿ ಸಂತ್ರಸ್ತ ಕೃಷಿಕ ಭಾಸ್ಕರ್ ಶೆಟ್ಟಿ ಜಾಗದಲ್ಲಿ ಪ್ರತಿಭಟನೆ ನಡೆಸಿ, ಕಂಪನಿಯ ದೌರ್ಜನ್ಯ ಹಾಗೂ ಸರ್ಕಾರದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಮಾತನಾಡಿ, ಮೂಡುಬಿದಿರೆ ಭಾಗದಲ್ಲಿ ಕೃಷಿಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ವಿವಿಧ ಜನವಿರೋಧಿ ಯೋಜನೆಗಳಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಈ ವಿದ್ಯುತ್ ಲೈನ್ ತಾಲೂಕಿನ ಒಂಬತ್ತು ಗ್ರಾಮಗಳಲ್ಲಿ ಹಾದು ಹೋಗುತ್ತದೆ. ಭಾಸ್ಕರ್ ಶೆಟ್ಟಿ, ಸಂಜೀವ ಗೌಡ, ರಾಜೇಶ್ ಭಂಡಾರಿ, ಮಿಜಾರುಗುತ್ತು ಪ್ರವೀಣ್ ರೈ, ಜಾನ್ ರೆಬೆಲ್ಲೊ, ಜೆಸಿಂತಾ ಸಹಿತ ಹಲವು ಕೃಷಿಕರು ಈ ದೌರ್ಜನ್ಯದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ತಂತಿ ಹೋಗುವ ಪ್ರದೇಶದವರಿಗೆ ನೋಟಿಸ್ ನೀಡಿಲ್ಲ, ಪರಿಹಾರವೂ ಇಲ್ಲ. ಸರ್ಕಾರ ಈ ರೈತ ವಿರೋಧಿ ನೀತಿ ಬಿಟ್ಟು ಶೀಘ್ರ ಸ್ಪಂದಿಸದಿದ್ದಲ್ಲಿ, ಮುಂದೆ ಸಾವಿರಾರು ಸಂಖ್ಯೆಯಲ್ಲಿ ರೈತರನ್ನು ಸೇರಿಸಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂತ್ರಸ್ತ ಕೃಷಿಕ ಭಾಸ್ಕರ್ ಶೆಟ್ಟಿ ಮಾತನಾಡಿ, ಪೊಲೀಸ್ ವ್ಯವಸ್ಥೆ ಪ್ರಯೋಗಿಸಿ ಬಲತ್ಕಾರವಾಗಿ ನಮ್ಮ ಭೂಮಿ ನಮ್ಮಿಂದ ಕಸಿಯುತ್ತಿದ್ದಾರೆ. ಪೊಲೀಸರು ಬಲವಂತವಾಗಿ ನಮ್ಮಿಂದ ಸಹಿ ಹಾಕಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದರು.
ತೆಂಕಮಿಜಾರು ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಸದಸ್ಯ ವಿದ್ಯಾನಂದ ಮಿಜಾರು, ದೋಟ ಸುರೇಶ್ ಶೆಟ್ಟಿ, ಪ್ರಮುಖರಾದ ವಸಂತ್ ಭಟ್, ಇರುವೈಲು ದೊಡ್ಡಗುತ್ತು ದಿನೇಶ್ ಶೆಟ್ಟಿ, ಜಾನ್ ರೆಬೆಲ್ಲೊ, ಜೆಸಿಂತಾ ಪಾಲ್ಗೊಂಡಿದ್ದರು.
ಅಧಿಕಾರಿಗಳು ವಾಪಸ್
ಪ್ರತಿಭಟನಾ ಸಂದರ್ಭದಲ್ಲಿ ಮತ್ತೊಂದು ಕಡೆ ಕುಳಿತಿದ್ದ ಸ್ಟೆರ್‌ಲೈಟ್ ಕಂಪೆನಿಯ ಸಿಬ್ಬಂದಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಆ ಪ್ರದೇಶದಿಂದ ವಾಪಸ್ ಕಳುಹಿಸಿದರು.