

ಬಾಗಲಕೋಟೆ: ನಿತ್ಯ ಜೀವನಕ್ಕೆ ಬಹು ಉಪಯುಕ್ತವಾದ ವಿದ್ಯುತ್‌ನ್ನು ಸಾರ್ವಜನಿಕರು ಮಿತವಾಗಿ ಬಳಸಿಕೊಳ್ಳಬೇಕೆಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧಿನದ ಬಾಗಲಕೋಟೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ವತಿಯಿಂದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಯಡಹಳ್ಳಿ ಸಾಳಗುಂದಿ, ಆನದಿನ್ನಿ ಕ್ರಾಸ್, ಛಬ್ಬಿ ಗ್ರಾಮಗಳ ಮನೆಗಳಿಗೆ ನಿರಂತರ ವಿದ್ಯುತ್ ಪೂರೈಸುವ ಪೂರ್ಣಗೊಂಡ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ಗಾಳಿ ನೀರು, ಬೆಳಕು ನಮಗೆ ಪ್ರಕೃತಿಯಿಂದ ದೊರೆತರೆ, ಮನುಷ್ಯನಿಂದ ನಿರ್ಮಿತಗೊಂಡ ವಿದ್ಯುತ್ ಕೂಡಾ ಇಂದು ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಇಂದು ಪ್ರತಿಯೊಂದು ಕಾರ್ಯಕ್ಕೆ ವಿದ್ಯುತ್ ಅವಶ್ಯವಾಗಿದೆ ಎಂದರು.
ವಿದ್ಯುತ್ ಹಣ ನೀಡಿ ಕೊಂಡುಕೊಳ್ಳುವ ವಸ್ತುವಲ್ಲ. ನಮ್ಮ ಸಂಪನ್ಮೂಲ ಬಳಸಿಕೊಂಡು ತಯಾರಿಸಿಕೊಳ್ಳುವ ಸಾಧನವಾಗಿದ್ದು, ಇಂದು ಉತ್ಪಾದನೆ ಕಡಿಮೆಯಾಗಿದೆ. ಬಳಕೆ ಹೆಚ್ಚಾಗಿದೆ. ಅದರನ್ನಲೂ ಬೇಸಿಗೆ ಸಮೀಪಿಸುತ್ತಿರುವದರಿಂದ ಕುಡಿಯುವ ನೀರಿನ ಸಮಸ್ಯೆ ಕೂಡಾ ಬರಬಹುದು. ಆ ನಿಟ್ಟಿನಲ್ಲಿ ನಮಗೆ ಬೇಕಾದಷ್ಟು ವಿದ್ಯುತ್ ಬಳಸಿಕೊಳ್ಳಬೇಕು ಎಂದರು. ಕೃಷಿಗಾಗಿ, ಆಹಾರಕ್ಕಾಗಿ ಕೈಗಾರಿಕೆಗಾಗಿ, ಬೀದಿ ದೀಪಗಳಿಗಾಗಿ ವಿದ್ಯುತ್ ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಇಂದು ವೈಭೋವಿಯ ಜೀವನಕ್ಕೆ ಮಾರು ಹೋಗಿ ಮೋಜು ಮಸ್ತಿಗಾಗಿ ಉತ್ಸವ ಮದುವೆಗಳಿಗಾಗಿ ಸಿಕ್ಕ ಸಿಕ್ಕಂತೆ ಬಳಕೆಯಾಗುತ್ತಿರುವುದು ವಿಪರ್ಯಾಸ. ಇದು ಮುಂದೊಂದು ದಿನ ಮಾರಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಾಲಾ ನಾಲತ್ವಾಡ, ಉಪಾಧ್ಯಕ್ಷ ಚಂದ್ರಶೇಖರ ಸಾಳಗುಂದಿ, ಎಇಇ ಬಾಲಚಂದ್ರ ಹಲಗತ್ತಿ, ಶಾಖಾಧಿಕಾರಿಗಳಾದ ಚಂದ್ರು ಲಮಾಣಿ, ಗದಿಗೆಪ್ಪ ಛಬ್ಬಿ, ಗುತ್ತಿಗೆದಾರ ಅರುಣ ನಾವಿ, ಹುಚ್ಚಪ್ಪ ನೀಲಣ್ಣವರ, ಮಹಾದೇವಪ್ಪ ನೀಲಣ್ನವರ, ಮುತ್ತಪ್ಪ ಮಾದರ್, ಮಲ್ಲಿಕಾರ್ಜುನ ಮಠ, ಮಂಜುನಾಥ್ ಮಾದರ್ ಶರಣಪ್ಪ ನೀಲಣ್ನವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.