

ಕಾರವಾರ: ಕೇಂದ್ರ ಸರ್ಕಾರ ಪ್ರಸ್ತಾಪಿತ ಹೊಸ ವಿದ್ಯುತ್ ಮಸೂದೆ ಜಾರಿ ವಿರೋಧಿಸಿ ಹೆಸ್ಕಾಂ ಕಾಯಂ ಹಾಗೂ ಗುತ್ತಿಗೆ ನೌಕರರು ಸೋಮವಾರ ಜಿಲ್ಲೆಯ ವಿವಿಧೆಡೆ ತಮ್ಮ ಕಚೇರಿಗಳ ಎದುರೇ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕಾಯಂ ನೌಕರರು ತಮ್ಮ ಕಚೇರಿಯಲ್ಲಿ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು. ಗುತ್ತಿಗೆ ನೌಕರರು ತಮ್ಮನ್ನು ಕಾಯಂಗೊಳಿಸಿ ಎಂಬ ಫಲಕ ಹಿಡಿದು ಕೆಲಸದ ಸ್ಥಳಗಳಲ್ಲಿ ಕೆಲ ಕಾಲ ಮೌನ ಪ್ರತಿಭಟನೆ ನಡೆಸಿದರು. ನಂತರ ತಮ್ಮ ಬೇಡಿಕೆಗಳ ಮನವಿಯನ್ನು ಎಇಇಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಹೊಸ ಮಸೂದೆ ಜಾರಿಯಿಂದ ಸಾರ್ವಜನಿಕ ವಲಯದ ವಿದ್ಯುತ್ ಉತ್ಪಾದನೆ, ಪ್ರಸರಣ ಹಾಗೂ ಸರಬರಾಜು ಒಂದೇ ಏಟಿಗೆ ಖಾಸಗಿ ವಲಯಕ್ಕೆ ಹೋಗಲಿದೆ. ಇದರಿಂದ ವಿದ್ಯುತ್ ಪ್ರಸರಣ ಕಂಪನಿಗಳು ಖಾಸಗಿ ಕಂಪನಿಗಳ ಕೈವಶವಾಗಲಿದ್ದು, ಬಡ ಕುಟುಂಬಗಳಿಗೆ ತೊಂದರೆ ಉಂಟಾಗಲಿದೆ ಎಂದು ನೌಕರರು ನೀಡಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಇದರಿಂದ ನೌಕರರು ಕರಾಳ ದಿನಾಚರಣೆ ಆಚರಿಸುತ್ತಿರುವುದಾಗಿ ಹೇಳಲಾಗಿದೆ. ಹೊಸ ವಿದ್ಯುತ್ ಮಸೂದೆಯನ್ನು ಕೈಬಿಡಬೇಕು. ಏಪ್ರಿಲ್ ತಿಂಗಳಿಂದ ಪರಿಷ್ಕೃತ ವೇತನ ಜಾರಿ ಮಾಡಬೇಕು. ಕರೊನಾ ಲಾಕ್ಡೌನ್ ಅವಧಿಯಲ್ಲಿ ಹೆಚ್ಚುವರಿ ವೇತನ ನೀಡಬೇಕು. ಆ ಅವಧಿಯಲ್ಲಿ ನೌಕರರ ಪಾಲಿನ ಪಿಎಫ್ ಕಡಿತ ಮಾಡದೇ ಪೂರ್ಣ ವೇತನ ನೀಡಬೇಕು. ಎಲ್ಲ ಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕು ಎಂದು ಮನವಿ ಮಾಡಲಾಯಿತು.
ಕಾರವಾರದಲ್ಲಿ ಚಿದಾನಂದ ಹರಿಕಂತ್ರ,ನಾಗರಾಜ ಹರಿಕಂತ್ರ,ವಿಘ್ನೕಶ ಉಳವೇಕರ,ಸತೀಶ ಖಾರ್ವಿ, ಗೌರೀಶ ಹರಿಕಂತ್ರ, ಪಾಂಡು ಹರಿಕಂತ್ರ,ರಾಘು ಹೆಗಡೆಕರ, ಯಾದೋಬ ಹರಿಕಂತ್ರ, ಗಣಪತಿ ಹರಿಕಂತ್ರ ಇದ್ದರು.