ವಿದ್ಯುತ್ ಬಿಲ್ ಬಾಕಿ ಮನ್ನಾಗೆ ಸಿಎಂ ಬಳಿ ನಿಯೋಗ

29spt1
Published on

ಸೋಮವಾರಪೇಟೆ: ಸಣ್ಣ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಬಾಕಿ ಮನ್ನಾದ ಬಗ್ಗೆ ಕಾಫಿ ಬೆಳೆಯುವ ಜಿಲ್ಲೆಗಳ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಭರವಸೆ ನೀಡಿದರು.


ಸಣ್ಣ ಕಾಫಿ ಬೆಳೆಗಾರರ 10 ಎಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡಬೇಕು. ಬೆಳೆಗಾರರ ಪಂಪ್‌ಸೆಟ್‌ಗಳ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂಬ ಬೆಳೆಗಾರರ ಆಗ್ರಹ ಮತ್ತು ಹಲವು ವರ್ಷಗಳ ಹೋರಾಟದ ಬಗ್ಗೆ ಸೋಮವಾರ ಸುದ್ದಿಗಾರರು ಗಮನಕ್ಕೆ ತಂದಾಗ ಉತ್ತರಿಸಿದರು.


ರಾಜ್ಯದಲ್ಲಿ ಅಡಕೆ, ಹೊಗೆಸೊಪ್ಪು, ಭತ್ತ, ಕಬ್ಬು ಇನ್ನಿತರ ಬೆಳೆಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಮಲೆನಾಡು ಭಾಗದಲ್ಲಿ ರೈತರ ಕಾಫಿ ಬೆಳೆಯುತ್ತಿದ್ದಾರೆ. ಕಾಫಿ ಉದ್ಯಮದಿಂದ ವಿದೇಶಿ ವಿನಿಮಯ ಹಾಗೂ ತೆರಿಗೆಯ ಮೂಲಕ ಸಾವಿರಾರು ಕೋಟಿ ರೂ.ಗಳು ಆದಾಯ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬರುತ್ತಿದೆ. ಅಕಾಲಿಕ ಮಳೆ ಹಾಗೂ ಬರದಿಂದಲೂ ಕಾಫಿ ತೋಟಗಳು ನಾಶವಾಗುತ್ತಿವೆ. 20ರಿಂದ 30 ಕೋಟಿ ರೂ.ನಷ್ಟು ವಿದ್ಯುತ್ ಬಿಲ್ ಬಾಕಿ ಇರಬಹುದು. ಅದನ್ನು ಸರ್ಕಾರ ಮನ್ನಾ ಮಾಡಬೇಕೆಂದು ರೈತ ಸಂಘದ ಸಂಚಾಲಕ ಲಕ್ಷ್ಮಣ್ ಒತ್ತಾಯಿಸಿದರು.


ಈಗ ಸರ್ಕಾರ ಕೆಲವು ಮಾನದಂಡದಲ್ಲಿ ಉಚಿತ ವಿದ್ಯುತ್ ನೀಡುವುದಕ್ಕೆ ತಕರಾರು ಇಲ್ಲ. ಆದರೆ, ರೈತರು ಪಂಪ್‌ಸೆಟ್‌ಗಳಿಗೆ ಬಳಸಿದ ವಿದ್ಯುತ್ ಬಿಲ್ ಬಾಕಿಯನ್ನು ಮನ್ನಾ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ವಿದ್ಯುತ್ ಶುಲ್ಕ, ಬಡ್ಡಿ, ಚಕ್ರಬಡ್ಡಿಯನ್ನು ಸೆಸ್ಕ್ ಹಾಕಿರುವುದರಿಂದ, ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಬಾಕಿ ಲಕ್ಷದವರೆಗೆ ತಲುಪಿದೆ. ಸಂಕಷ್ಟದ ಸಂದರ್ಭದಲ್ಲಿ ಬಿಲ್ ಪಾವತಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಉಸ್ತವಾರಿ ಸಚಿವರಿಗೆ ಮನವರಿಕೆ ಮಾಡಿದರು. ಶಾಸಕರಾದಿಯಾಗಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರೆ, ಸಮಸ್ಯೆ ಬಗೆಹರಿಯಬಹುದು ಎಂದು ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net