

ಕಲಬುರಗಿ: ವಿದ್ಯಾರ್ಥಿಗಳು ಹಾನಿಕಾರಕ ಮತ್ತು ನಕಾರಾತ್ಮಕ ವಿಚಾರ ತೊರೆದು ಒಳ್ಳೆಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರೂ ಆದ ವಿಶೇಷಾಧಿಕಾರಿ ಪ್ರೊ.ಚಂದ್ರಕಾAತ ಕೆಳಮನಿ ಕಿವಿಮಾತು ಹೇಳಿದರು.
ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಕನ್ನಡ ಮತ್ತು ಜಾನಪದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಬೀಳ್ಕೊಡುಗೆ ಮತ್ತು ಕನ್ನಡ ಸಂಘದ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿದ ಅವರು, ಕನ್ನಡ ಕಲಿಯಬೇಕಾದರೆ ಶ್ರಮಿಸಬೇಕು. ತನ್ಮಯ ಭಾವದಿಂದ ನಿರಂತರ ಅಧ್ಯಯನ ಮಾಡಿದಾಗಲೇ ಸಾಹಿತ್ಯದ ಗೀಳು ಹುಟ್ಟುತ್ತದೆ. ಸಾಹಿತ್ಯ ಜನಮನಕ್ಕೆ ಮಿಡಿಯುವಂತಹದ್ದು. ನಾಡು-ನುಡಿಯ ವೈವಿಧ್ಯ, ಸಾಂಸ್ಕೃತಿಕ ಮೆರುಗು ಮೆಚ್ಚುವಂತಹದ್ದು. ಸಾಹಿತ್ಯ ಅಧ್ಯಯನದಿಂದ ಇಂದಿನ ಸಮಾಜದಲ್ಲಿನ ವೈರುಧ್ಯಗಳನ್ನು ಮೆಟ್ಟಿ ಸನ್ಮಾರ್ಗದತ್ತ ಸಾಗಬೇಕು ಎಂದರು.
ಸರಿಯಾದ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕು. ನಾವು ಓದುವ ವಿಷಯದಲ್ಲಿ ಶ್ರದ್ಧೆ, ಪ್ರೀತಿ, ಆತ್ಮಸ್ಥೆರ್ಯ, ವಿಶ್ವಾಸವಿದ್ದಾಗ ಅದು ನಮ್ಮನ್ನು ಬೆಳೆಸುತ್ತದೆ. ಮನುಷ್ಯನ ದೇಹದಲ್ಲಿನ ಬಿಳಿ ರಕ್ತ ಕಣಗಳು ಜೀವ ರಕ್ಷಕ ಜೀವಿಗಳಾಗಿ ಪ್ರತಿರೋಧಕವನ್ನು ಉಂಟು ಮಾಡಿ ಮನುಷ್ಯನನ್ನು ರಕ್ಷಿಸುತ್ತವೆ. ಹಾಗೆಯೇ ಕೋಣ ಕೋಣನಿಗೆ ಒಂದೇ ಹಾದಿ, ಕೋಣ ಜಾಣನಿಗೆ ಎರಡು ಹಾದಿ, ಜಾಣ ಜಾಣನಿಗೆ ಮೂರು ಹಾದಿ ಎಂಬಂತೆ ವಿದ್ಯಾರ್ಥಿಗಳು ಜಾಣ ಜಾಣರಾಗಿ ಬದುಕು ಕಟ್ಟಿಕೊಳ್ಳುವ ನೆಲೆಯಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿ ಜೀವನ ಸಾರ್ಥಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಶೈಲ ನಾಗರಾಳ ಮಾತನಾಡಿ, ವಿಶ್ವವಿದ್ಯಾಲಯ ಎಂಬುದು ಜ್ಞಾನದ ಕಾಶಿ. ಅದರ ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು. ಕಬೀರದಾಸ ಹೇಳುವಂತೆ ಗುರು ಬದುಕಿನ ಮಾರ್ಗ, ಲೋಕಕ್ಕೆ ಪರಿಚಯಿಸಿ ಜೀವಿಸುವ ಕಲೆ ಹೇಳುವವನು ಗುರು. ಆದ್ದರಿಂದ ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ವಿದ್ಯಾರ್ಥಿ ಜೀವನದ ಸಮಯ ವಿನಿಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ವಿದ್ಯಾ ಸಂಸ್ಥೆಗೆ ಬಂದು ಹೋಗುವುದೇ ಮುಖ್ಯವಲ್ಲ. ಅರ್ಥೈಸಿಕೊಂಡು ಏಕಾಗ್ರತೆಯಿಂದ ಸತತ ಪರಿಶ್ರಮ, ಆಸಕ್ತಿ ಮತ್ತು ಧನಾತ್ಮಕ ಚಿಂತನೆ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಬದುಕಿನಲ್ಲಿ ನಿರಾಶರಾಗಬಾರದು ಎಂದು ಹೇಳಿದರು.